ADVERTISEMENT

ಹೊಯ್ಗೆ ಬಜಾರ್– ಕುಳೂರು ನಡುವೆ ರೋರೊ

ಗುರುಪುರ ನದಿಭಾಗದಲ್ಲಿ ಜಲಮಾರ್ಗ ಅಭಿವೃದ್ಧಿ ಯೋಜನೆಗೆ ಸಾರ್ವಜನಿಕರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 0:59 IST
Last Updated 17 ಅಕ್ಟೋಬರ್ 2025, 0:59 IST
ಮಂಗಳೂರಿನ ಹಳೆ ಬಂದರು ಆವರಣದಲ್ಲಿ ನಡೆದ ಸಾರ್ವಜನಿಕ ಅಹವಾಲು ಆಲಿಕೆ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮಾತನಾಡಿದರು
ಮಂಗಳೂರಿನ ಹಳೆ ಬಂದರು ಆವರಣದಲ್ಲಿ ನಡೆದ ಸಾರ್ವಜನಿಕ ಅಹವಾಲು ಆಲಿಕೆ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮಾತನಾಡಿದರು   

ಮಂಗಳೂರು: ಕರ್ನಾಟಕ ಜಲಸಾರಿಗೆ ಮಂಡಳಿಯು ಸಾಗರಮಾಲಾ ಯೋಜನೆಯಡಿ ಹೊಯ್ಗೆಬಜಾರದಿಂದ ಕೂಳೂರು ನಡುವಿನ ಜಲಮಾರ್ಗದಲ್ಲಿ ರೋರೊ ಹಡಗುಗಳ ಸಂಚಾರಕ್ಕೆ ಯೋಜನೆ ರೂಪಿಸಿದೆ.

ಕೂಳೂರು ಮತ್ತು ಹಳೆ ಬಂದರಿನಲ್ಲಿ ತಲಾ ಒಂದು ಜೆಟ್ಟಿ ನಿರ್ಮಾಣ, ಟರ್ಮಿನಲ್ ಕಟ್ಟಡ ನಿರ್ಮಾಣ ಸೇರಿದಂತೆ ಜಲಮಾರ್ಗ ಅಭಿವೃದ್ಧಿಗೆ ಒಟ್ಟು ₹29.62 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದ್ದು, ಗುತ್ತಿಗೆದಾರ ಸತೀಶ್ ಶೇಟ್ ₹13.90 ಕೋಟಿ ಮೊತ್ತಕ್ಕೆ ಗುತ್ತಿಗೆ ಪಡೆದಿದ್ದಾರೆ.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅಧ್ಯಕ್ಷತೆಯಲ್ಲಿ ಗುರುವಾರ ಇಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಪರಿಸರಾಸಕ್ತರು, ಸ್ಥಳೀಯ ಮೀನುಗಾರರು, ಪ್ರಸ್ತಾವಿತ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಸನ್ನ ಕುಮಾರ್ ಮಾಹಿತಿ ನೀಡಿ, ‘ಉದ್ದೇಶಿತ ಯೋಜನೆಗೆ 2022ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ. ತಲಾ 400 ಟನ್ ಸಾಗಣೆ ಸಾಮರ್ಥ್ಯದ ಎರಡು ರೋರೊ ಹಡಗುಗಳು ಕಾರ್ಯಾಚರಿಸಲಿದ್ದು, ಪ್ರತಿದಿನ 200 ಪ್ರಯಾಣಿಕರೊಂದಿಗೆ ಆರು ರೋರೊ ಟ್ರಿಪ್‌ಗಳು ಇರುತ್ತವೆ. ಎರಡು ಹಡಗುಗಳಿಂದ ಒಟ್ಟು 12 ಟ್ರಿಪ್‌ಗಳು ಆಗಬಹುದು. ಯೋಜನೆ ಅನುಷ್ಠಾನಕ್ಕೆ 18 ತಿಂಗಳ ಅವಧಿ ನಿಗದಿಪಡಿಸಲಾಗಿದೆ’ ಎಂದರು. 

ರಸ್ತೆ ಮಾರ್ಗದಲ್ಲಿ 11.5 ಕಿ.ಮೀ ಪ್ರಯಾಣಕ್ಕೆ ಅರ್ಧ ತಾಸು ಬೇಕಾದರೆ, ರೋರೊ ಹಡಗಿನಲ್ಲಿ 8 ಕಿ.ಮೀ ಪ್ರಯಾಣಿಸಿ 15 ನಿಮಿಷಗಳಲ್ಲಿ ನಿಗದಿತ ಸ್ಥಳ ತಲುಪಬಹುದು ಎಂದು ತಿಳಿಸಿದರು.

ಮಂಗಳೂರು ನಗರದಲ್ಲಿ ಯಾವುದೇ ರೀತಿಯ ತೊಂದರೆ ಎದುರಾದಾಗ ಈ ಜಲಮಾರ್ಗವು ಪರ್ಯಾಯ ಸಂಪರ್ಕ ವ್ಯವಸ್ಥೆಯಾಗಲಿದೆ. ಪರಿಸರ ಅಧಿಕಾರಿಗಳು ಸ್ಥಳ ಭೇಟಿ ನೀಡಿಯೇ ಯೋಜನೆ ರೂಪಿಸಿದ್ದಾರೆ.
ದರ್ಶನ್ ಎಚ್‌.ವಿ ಜಿಲ್ಲಾಧಿಕಾರಿ

‘ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ’

ಕೋಸ್ಟಲ್ ಬರ್ತ್ ಸಾಗರಮಾಲಾ ಮೊದಲಾದ ಯೋಜನೆಗಳಿಂದ ಕಸಬಾ ಬೆಂಗ್ರೆಯ ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇಂತಹ ಯೋಜನೆಗಳಿಂದ ಸಾಂಪ್ರದಾಯಿಕ ಮೀನುಗಾರಿಕೆ ಮೇಲೆ ನೇರ ಪರಿಣಾಮವಾಗುತ್ತದೆ. ಮೀನುಗಾರರನ್ನು ಕತ್ತಲೆಯಲ್ಲಿಟ್ಟು ಯಾವುದೇ ಯೋಜನೆ ಜಾರಿಗೊಳಿಸಬೇಡಿ ಎಂದು ಕಸಬಾ ಬೆಂಗ್ರೆಯ ಅಬ್ದುಲ್ ತಯ್ಯೂಬ್ ಹೇಳಿದರು. ಕಸಬಾ ಬೆಂಗ್ರೆ ಜಮಾತ್ ಅಧ್ಯಕ್ಷ ಬಿಲಾಲ್ ಮೊಯ್ದಿನ್ ಮಾತನಾಡಿ ‘ದ್ವೀಪವಾಗಿರುವ ಕಸಬಾ ಬೆಂಗ್ರೆಯಲ್ಲಿ 2000 ಕುಟುಂಬಗಳು ಇವೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಜನರು ಅನುಭವಿಸುತ್ತಿರುವ ತೊಂದರೆಯನ್ನು ತಿಳಿದುಕೊಳ್ಳಬೇಕು’ ಎಂದರು.

‘ಸ್ಥಳೀಯರ ಸಮಸ್ಯೆ ಆಲಿಸಿ’

‘ಅಭಿವೃದ್ಧಿಯನ್ನು ನಾವು ವಿರೋಧಿಸುವುದಿಲ್ಲ ಆದರೆ ಜನರಿಗೆ ತೊಂದರೆ ನೀಡಿ ಯೋಜನೆ ಜಾರಿ ಆಗಬಾರದು. ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ಇಲ್ಲಿ ಲಕ್ಷದ್ವೀಪದ ಹಡಗುಗಳು ಬರುತ್ತವೆ. ದಕ್ಕೆಯಲ್ಲಿ ಜಾಗದ ಕೊರತೆಯ ಪರಿಣಾಮವಾಗಿ ಇಲ್ಲಿನ ಉದ್ಯಮ ಸೊರಗಿದೆ. ಲಕ್ಷದ್ವೀಪದಿಂದ ಬರುವವರು ಕೊಚ್ಚಿ ಬಂದರು ಕಡೆ ಆಕರ್ಷಿತರಾಗಿದ್ದಾರೆ. ಹೀಗಾಗಿ ಯಾವುದೇ ಯೋಜನೆ ಅನುಷ್ಠಾನದ ಪೂರ್ವದಲ್ಲಿ ಸ್ಥಳೀಯರಿಗೆ ಆಗುವ ಸಮಸ್ಯೆಯನ್ನು ಮೊದಲು ಪರಿಶೀಲಿಸಬೇಕು’ ಎಂದು ಈ ವಾರ್ಡ್‌ನ ಮುಖಂಡ ಅಬ್ದುಲ್ ಲತೀಫ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.