ADVERTISEMENT

ಹಕ್ಕುಪತ್ರ ವಿತರಣೆಗೆ ಮೂರು ತಿಂಗಳ ಗಡುವು

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಾಕೀತು

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 15:48 IST
Last Updated 18 ಜೂನ್ 2019, 15:48 IST
ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.– ಪ್ರಜಾವಾಣಿ ಚಿತ್ರ
ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.– ಪ್ರಜಾವಾಣಿ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು 94 ಸಿ ಮತ್ತು 94ಸಿಸಿ ಅಡಿಯಲ್ಲಿ ಸಕ್ರಮ ಕೋರಿ ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿ, ಮೂರು ತಿಂಗಳೊಳಗೆ ಹಕ್ಕುಪತ್ರ ವಿತರಿಸುವಂತೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅಧಿಕಾರಿಗಳಿಗೆ ಗಡುವು ವಿಧಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ 94ಸಿ ಮತ್ತು 94ಸಿಸಿ ಅಡಿ ಹಕ್ಕುಪತ್ರ ವಿತರಣೆ ವಿಳಂಬ ಆಗುತ್ತಿರುವ ಕುರಿತು ಚರ್ಚೆ ನಡೆಯಿತು. ಮೂರು ತಿಂಗಳೊಳಗೆ ಹಕ್ಕುಪತ್ರ ವಿತರಿಸುವಂತೆ ತಹಶೀಲ್ದಾರ್‌ಗಳಿಗೆ ತಾಕೀತು ಮಾಡಿದ ಸಚಿವರು, ತಾಲ್ಲೂಕು ಕಚೇರಿಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲೆಯಲ್ಲಿ 94 ಸಿ ಅಡಿಯಲ್ಲಿ 1,07,190 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 45,853 ಅರ್ಜಿದಾರರಿಗೆ ಹಕ್ಕುಪತ್ರ ವಿತರಿಸಲಾಗಿದೆ. 51,209 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 10,128 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. 94ಸಿಸಿ ಅಡಿಯಲ್ಲಿ 40,245 ಅರ್ಜಿಗಳು ಸಲ್ಲಿಕೆಯಾಗಿದ್ದವು. 23,719 ಅರ್ಜಿದಾರರಿಗೆ ಹಕ್ಕುಪತ್ರ ವಿತರಿಸಲಾಗಿದೆ. 11,002 ಅರ್ಜಿಗಳನ್ನು ತಿರಸ್ಕರಿಸಿದ್ದು, 5,524 ಅರ್ಜಿಗಳು ಬಾಕಿ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಪರಿಭಾವಿತ ಅರಣ್ಯ ಮತ್ತು ಅರಣ್ಯ ಜಮೀನಿನಲ್ಲಿರುವ ಮನೆಗಳಿಗೆ ಹಕ್ಕುಪತ್ರ ಕೋರಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಅಂತಹ ಅರ್ಜಿಗಳ ಹೊರತಾಗಿ, ಯಾವುದೇ ತಕರಾರುಗಳಿಲ್ಲದ ಅರ್ಜಿಗಳನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು ಎಂದು ದೇಶಪಾಂಡೆ ಆದೇಶಿಸಿದರು.

ಮಳೆ ಕೊರತೆ: ವಾಡಿಕೆಯಂತೆ ಜೂನ್‌ ಎರಡನೇ ವಾರದವರೆಗೆ 673.9 ಮಿಲಿ ಮೀಟರ್‌ ಮಳೆ ಬೀಳಬೇಕಿತ್ತು. ಕಳೆದ ವರ್ಷ ಈ ಅವಧಿಯವರೆಗೆ 1,069 ಮಿ.ಮೀ. ಮಳೆಯಾಗಿತ್ತು. ಈ ಬಾರಿ 229.8 ಮಿ.ಮೀ.ಯಷ್ಟು ಮಳೆ ಮಾತ್ರ ಬಿದ್ದಿದೆ. ವಾಡಿಕೆಯ ಮಳೆಯಲ್ಲಿ ಶೇಕಡ 30ರಷ್ಟು ಮಾತ್ರ ಸುರಿದಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ವಿವರ ನೀಡಿದರು.

ಮೇ ಅಂತ್ಯ ಮತ್ತು ಜೂನ್‌ ಮೊದಲ ವಾರದಲ್ಲಿ ಮಂಗಳೂರು ನಗರ, ಉಳ್ಳಾಲ, ಮೂಡುಬಿದಿರೆ, ಮೂಲ್ಕಿ ಮತ್ತು ಬಂಟ್ವಾಳ ನಗರ ಪ್ರದೇಶಗಳು ಹಾಗೂ 24 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿತ್ತು. ನಗರ ಪ್ರದೇಶದಲ್ಲಿ ರೇಷನಿಂಗ್‌ ಮತ್ತು ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಿ ಪರಿಸ್ಥಿತಿ ನಿಭಾಯಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದರು. ಹರೇಕಳದಿಂದ ಅಡ್ಯಾರ್‌ವರೆಗೆ ₹ 200 ಕೋಟಿ ವೆಚ್ಚದಲ್ಲಿ ಅಣೆಕಟ್ಟೆ ಮತ್ತು ಸೇತುವೆ ನಿರ್ಮಾಣಕ್ಕೆ ಶೀಘ್ರದಲ್ಲಿ ಟೆಂಡರ್‌ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಪ್ರತಿಕ್ರಿಯಿಸಿದರು. ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಬೃಹತ್‌ ಕೈಗಾರಿಕೆಗಳಿಂದ ಅಣೆಕಟ್ಟೆ ನಿರ್ಮಾಣ ಮತ್ತು ಪಶ್ಚಿಮ ವಾಹಿನಿ ಯೋಜನೆಗೆ ಆದ್ಯತೆ ನೀಡುವಂತೆ ಕಂದಾಯ ಸಚಿವರು ಸೂಚಿಸಿದರು.

ಎಚ್ಚರಿಕೆ ವಹಿಸಲು ಸೂಚನೆ:

ಕಳೆದ ವರ್ಷದ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿದ್ದ ಸಂಪಾಜೆ ಮತ್ತು ಶಿರಾಡಿ ಘಾಟಿ ಮಾರ್ಗಗಳಲ್ಲಿ ಶಾಶ್ವತ ಭೂಕುಸಿತ ತಡೆ ಕಾಮಗಾರಿ ಕೈಗೊಳ್ಳದೇ ಇರುವುದರಿಂದ ಈ ಬಾರಿಯೂ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು. ಅಡ್ಡಹೊಳೆ– ಬಿ.ಸಿ.ರೋಡ್‌ ಮಾರ್ಗದಲ್ಲಿ ರಸ್ತೆ ವಿಸ್ತರಣೆಗೆ ದಿಬ್ಬಗಳನ್ನು ಕತ್ತರಿಸಿ ಹಾಗೆಯೇ ಬಿಟ್ಟಿರುವುದೂ ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಸಬಹುದು ಎಂದು ಜಿಲ್ಲಾಧಿಕಾರಿ ದನಿಗೂಡಿಸಿದರು.

‘ಮಳೆಗಾಲದಲ್ಲಿ ಹಾನಿಯಾಗಿದ್ದ ಸಂಪಾಜೆ ಮತ್ತು ಶಿರಾಡಿ ಘಾಟಿಗಳಲ್ಲಿ ತಾತ್ಕಾಲಿಕ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಶಾಶ್ವತ ಭೂಕುಸಿತ ತಡೆ ಕಾಮಗಾರಿಗೆ ಸಂಪಾಜೆ ಘಾಟಿಗೆ ₹ 47 ಮತ್ತು ಶಿರಾಡಿ ಘಾಟಿಗೆ ₹ 35 ಕೋಟಿ ಅನುದಾನ ಕೋರಲಾಗಿತ್ತು. ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರಕಿಲ್ಲ. ಈಗ ರಾಜ್ಯ ಸರ್ಕಾರಕ್ಕೆ ಹೊಸದಾಗಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಸುಬ್ಬರಾಮ ಹೊಳ್ಳ ತಿಳಿಸಿದರು.

‘ಮಲೆಗಾಲದ ಅವಧಿಯಲ್ಲಿ ಜನರಿಗೆ ತೊಂದರೆ ಆಗಬಾರದು. ದುರಸ್ತಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ದೇಶಪಾಂಡೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.