ಮಂಗಳೂರು: ಜಿಲ್ಲೆಯಲ್ಲಿ ಮರಳು ಮತ್ತು ಕೆಂಪುಕಲ್ಲುಗಳ ಅಕ್ರಮ ಗಣಿಗಾರಿಕೆಗೆ, ಅಕ್ರಮ ವಹಿವಾಟಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ. ಕಾನೂನುಬದ್ಧವಾಗಿ ಮರಳು ಹಾಗೂ ಕೆಂಪುಕಲ್ಲು ಗಣಿಗಾರಿಕೆ ನಡೆಸುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಹೇಳಿದೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಈ ಬಗ್ಗೆ ತಿಳಿಸಿದರು. ಮರಳು ಹಾಗೂ ಕೆಂಪುಕಲ್ಲು ವಿಚಾರದಲ್ಲಿ ಮೃದು ಧೋರಣೆ ತಳೆಯಬೇಕು ಎಂಬ ಶಾಸಕರ ಕೋರಿಕೆಗೆ ಅವರು ಸೊಪ್ಪು ಹಾಕಲಿಲ್ಲ.
‘ಕಾನೂನುಬದ್ಧವಲ್ಲದ ಯಾವುದೇ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ ಪೊಲೀಸ್ ಕಮಿಷನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನನ್ನ ನಿಲುವು ಒಂದೇ. ಅಕ್ರಮ ನಿಯಂತ್ರಿಸಲು ಏಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
‘ಜಿಲ್ಲೆಯಲ್ಲಿ ಗುರುತಿಸಿರುವ 18 ಮರಳು ಬ್ಲಾಕ್‌ಗಳ ಟೆಂಡರ್‌ನಲ್ಲಿ ಭಾಗವಹಿಸಲು ಯಾರೂ ಆಸಕ್ತಿ ತೊರಿಲ್ಲ. ಮರು ಟೆಂಡರ್ ಕರೆದು ಆಯಾ ತಾಲ್ಲೂಕಿನವರ ಬದಲು ಜಿಲ್ಲೆಯ ಯಾವುದೇ ವ್ಯಕ್ತಿ ಭಾಗವಹಿಸಲು ಅವಕಾಶ ಕಲ್ಪಿಸುತ್ತೇವೆ. ಜಿಲ್ಲೆಯ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುತ್ತೇವೆ’ ಎಂದರು.
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ‘ಇಷ್ಟು ವರ್ಷ ಅಕ್ರಮ ನಡೆದಿರಬಹುದು. ಆದರೆ ಇನ್ನು ಅವಕಾಶವಿಲ್ಲ. ಜಿಲ್ಲೆಯಲ್ಲಿ ಕೋಮುಗಲಭೆಗಳು ನಡೆದಾಗ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬ ದೂರುಗಳು ಬಂದವು. ಅಕ್ರಮ ತಡೆಗೆ ನಾವು ಹೆಜ್ಜೆ ಇಟ್ಟಾಗಿದೆ. ಈಗ ಮತ್ತೆ ಹಿಂದಕ್ಕೆ ಹೋಗಲು ಸಾಧ್ಯವಿಲ್ಲ’ ಎಂದರು.
‘ಬಳ್ಳಾರಿಯ ಸ್ಥಿತಿ ಇಲ್ಲಿ ನಿರ್ಮಾಣವಾಗಿ, ಇಲ್ಲಿನವರು ಜೈಲಿಗೆ ಹೋಗುವುದು ಬೇಡ. ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪುಕಲ್ಲು ಅಕ್ರಮ ಗಣಿಗಾರಿಕೆಗೆ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವ್ಯವಹಾರ ನಡೆದಿರುವುದನ್ನು ತಮ್ಮ ವರದಿಯಲ್ಲಿ ಖಚಿತಪಡಿಸಿದರೆ ಸಮಸ್ಯೆ ಆಗುತ್ತದೆ’ ಎಂದು ವಿವರಿಸಿದರು.
ಮರಳು, ಕೆಂಪುಕಲ್ಲು ಲಭ್ಯವಾಗದೇ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕ ಉಮಾನಾಥ ಕೋಟ್ಯಾನ್, ‘ಕೇರಳದಲ್ಲಿ ಕೆಂಪುಕಲ್ಲು ಟನ್‌ಗೆ ₹ 32 ರಾಯಧನ ಮಾತ್ರ ಕಟ್ಟಿಸಿಕೊಳ್ಳಲಾಗುತ್ತದೆ. ಇಲ್ಲಿ ₹260 ಕಟ್ಟಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ನಂತರ ಹುಡುಕಿ. ಸಮಸ್ಯೆಗೆ ತಾತ್ಕಾಲಿಕ ಮಾರ್ಗೋಪಾಯ ಕಂಡುಕೊಳ್ಳಿ’ ಎಂದು ಒತ್ತಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು, ‘ಯಾವ ತಾತ್ಕಾಲಿಕ ಮಾರ್ಗವೂ ಇಲ್ಲ. ಕಾನೂನುಬದ್ಧ ಮಾರ್ಗ ಮಾತ್ರ. ರಾಯಧನಕ್ಕೆ ಸಂಬಂಧಿಸಿದ ಸಮಸ್ಯೆ ಇತ್ಯರ್ಥದ ಬಗ್ಗೆ ಶೀಘ್ರವೇ ಬೆಂಗಳೂರಿನಲ್ಲಿ ಗಣಿ ಮತ್ತು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸುತ್ತೇವೆ. ಅದಕ್ಕೆ ಮುನ್ನ ಇಲ್ಲಿನ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸಬೇಕು’ ಎಂದು ಸೂಚಿಸಿದರು.
‘ಜಿಲ್ಲೆಯಲ್ಲಿ ಕ್ರಮಬದ್ಧವಾಗಿ ಗಣಿಗಾರಿಕೆ ನಡೆಸುವವರ ಮೇಲೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರು ಕೆಂಪುಕಲ್ಲು ಹಾಗೂ ಮರಳು ಪೂರೈಸದಂತೆ ಬೆದರಿಕೆ ಒಡ್ಡುತ್ತಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದೇವೆ. ಇದು ಮರುಕಳಿಸಿದರೆ, ಸಂಘಟಿತ ಅಪರಾಧ ತಡೆ ಕಾನೂನಿನಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಸಿದರು.
‘ಉಡುಪಿ ಜಿಲ್ಲೆಯ ಮಾದರಿಯಲ್ಲಿ ಇಲ್ಲೂ ಮರಳು ಹಾಗೂ ಕೆಂಪುಕಲ್ಲು ಪೂರೈಕೆಗೆ ಸಹಾಯವಾಣಿ ಆರಂಭಿಸಿ. ಸ್ಯಾಂಡ್ ಬಜಾರ್ ಆ್ಯಪ್ ನಲ್ಲೇ ಮರಳು ಖರೀದಿಗೆ ಅವಕಾಶ ಕಲ್ಪಿಸಿ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಸೂಚಿಸಿದರು.
‘ಇಲ್ಲಿ ಕೆಂಪುಕಲ್ಲಿನ ರಾಯಧನವನ್ನು ಏಕಾಏಕಿ ಟನ್‌ಗೆ ₹ 150 ಹೆಚ್ಚಳಮಾಡಲಾಗಿದೆ. ಕೆಂಪುಕಲ್ಲು ಟನ್‌ಗೆ ₹ 282 ಕಟ್ಟುತ್ತಿದ್ದಾರೆ ಅದನ್ನು ಕಡಿತಮಾಡಿ’ ಎಂದು ಶಾಸಕ ರಾಜೇಶ್ ನಾಯ್ಕ ಉಳಿಪಾಡಿ ಸಲಹೆ ನೀಡಿದರು.
ಕೆಂಪುಕಲ್ಲು ಗಣಿಯಲ್ಲ, ಇಟ್ಟಿಗೆ– ಮನೆ ಕಟ್ಟಲು ಅದೇ ಬೇಕು: ಕೋಟ್ಯಾನ್ ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಮರಳು ಖರೀದಿಸಬಹುದು: ಡಿ.ಸಿ ಗಡಿಯಾಚೆಯಿಂದ ಮರಳು, ಕೆಂಪುಕಲ್ಲು ಅಕ್ರಮ ಪೂರೈಕೆ ತಡೆ: ಕಮಿಷನರ್
ಮರಳುಗಾರಿಕೆ ಸ್ಥಗಿತ–ಅಂತರ್ಜಲ ಕುಸಿತ: ಪೂಂಜ ‘ಜಿಲ್ಲೆಯಲ್ಲಿ ಮರಳುಗಾರಿಕೆ ಅವಕಾಶ ನೀಡದ ಕಾರಣ ನದಿಯ ಹೊಂಡಗಳಲ್ಲಿ ಮರಳು ತುಂಬಿದೆ. ಇದು ಅಂತರ್ಜಲ ಕುಸಿತಕ್ಕೆ ಕಾರಣವಾಗುತ್ತಿದೆ‘ ಎಂದು ಶಾಸಕ ಹರೀಶ್ ಪೂಂಜ ದೂರಿದರು. ‘ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದ ಕೆಸರುಮಯ ರಸ್ತೆಗೆ ಚರಳು (ದೊಡ್ಡಗಾತ್ರದ ಮರಳು) ಕೂಡ ಸಿಗುತ್ತಿಲ್ಲ. ಮರಳು ಸಿಗದೇ ಕೆಲವರು ಗೃಹಪ್ರವೇಶ ಕಾರ್ಯಕ್ರಮ ಮುಂದೂಡುವ ಸ್ಥಿತಿ ಎದುರಾಗಿದೆ ಮೇಸ್ತ್ರಿಗಳಿಗೆ ಕೆಲಸ ಇಲ್ಲವಾಗಿದೆ’ ಎಂದರು.
ಎಲ್ಲರನ್ನು ಸೇರಿಸಿ ದಂಗೆ: ಕೋಟ್ಯಾನ್ ಮರಳು ಕೆಂಪುಕಲ್ಲು ಅಕ್ರಮ ಗಣಿಗಾರಿಕೆ ತಡೆಯುವ ಕುರಿತ ಕಟ್ಟುನಿಟ್ಟಿನ ನಿಲುವು ಬದಲಿಸಲು ಅಧಿಕಾರಿಗಳು ಒಪ್ಪದಿದ್ದಾಗ ಸಿಟ್ಟಾದ ಶಾಸಕ ಉಮಾನಾಥ್ ಕೋಟ್ಯಾನ್ ‘ಮರಳು ಕೆಂಪುಕಲ್ಲು ಕೊರತೆ ನೀಗದಿದ್ದರೆ ಎಲ್ಲರನ್ನೂ ಸೇರಿಸಿ ದಂಗೆ ಏಳಲು ಸಿದ್ಧ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.