ADVERTISEMENT

ಆರೋಪಿಗಳ ಬಂಧನಕ್ಕೆ ಮೀನಾಮೇಷ: ಪೊಲೀಸರ ವಿರುದ್ಧ ಆರೋಪ

ರಾಜಾರೋಷವಾಗಿ ಓಡಾಡಿದರೂ ಆರೋಪಿಗಳ ಬಂಧನವಿಲ್ಲ: ಲೈಂಗಿಕ ಕಿರುಕುಳ ಸಂತ್ರಸ್ತೆ ಆರೋಪ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 16:17 IST
Last Updated 9 ಮಾರ್ಚ್ 2023, 16:17 IST

ಮಂಗಳೂರು: ಇಲ್ಲಿನ ಚರ್ಚ್‌ ಆಫ್‌ ಸೌತ್‌ ಇಂಡಿಯಾದ (ಸಿಎಸ್‌ಐ) ಕರ್ನಾಟಕ ದಕ್ಷಿಣ ಸಭಾಪ್ರಾಂತದ ಕಚೇರಿಯಲ್ಲಿ ಬಿಷಪ್‌ ಅವರ ಕಾರ್ಯದರ್ಶಿಯಾಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗಳನ್ನು ಬಂಧಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

‘ಸಭಾಪ್ರಾಂತ್ಯದ ಚುನಾವಣೆಯಲ್ಲಿ ಭಾಗವಹಿಸಲು ಬಂದಾಗಲೂ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ’ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ಸಭಾಪ್ರಾಂತ್ಯದ ಖಜಾಂಜಿ ವಿನ್ಸೆಂಟ್‌ ಪಾಲನ್ನ ಹಾಗೂ ಕಾನೂನು ಸಲಹೆಗಾರ ಫಾ.ನೋಯಲ್‌ ಪಿ.ಕರ್ಕಡ ಸೇರಿ ಆರು ಮಂದಿ ವಿರುದ್ಧ ಮಹಿಳಾ ಠಾಣೆಗೆ ಸಂತ್ರಸ್ತ ಮಹಿಳೆ ಮಂಗಳವಾರ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ADVERTISEMENT

‘ಸಭಾಪ್ರಾಂತ್ಯದ ಪದಾಧಿಕಾರಿಗಳ ಆಯ್ಕೆಗೆ ಗುರುವಾರ ಚುನಾವಣೆ ನಡೆದಿದ್ದು, ಈ ಪ್ರಕ್ರಿಯೆಯಲ್ಲಿ ವಿನ್ಸೆಂಟ್‌ ಪಾಲನ್ನ ಹಾಗೂ ಫಾ.ನೋಯಲ್‌ ಪಿ.ಕರ್ಕಡ ರಾಜಾರೋಷವಾಗಿ ಭಾಗವಹಿಸಿದ್ದರು. ವಿನ್ಸೆಂಟ್‌ ಖಜಾಂಜಿಯಾಗಿ ಪುನರಾಯ್ಕೆಯಾಗಿದ್ದಾರೆ. ಆರೋಪಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಪ್ರಯತ್ನವನ್ನೂ ಮಾಡಿಲ್ಲ’ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮಂಗಳೂರು ಪೊಲೀಸ್‌ ಕಮಿಷನರ್‌ ಕುಲ್‌ದೀಪ್‌ ಕುಮಾರ್‌ ಆರ್‌. ಜೈನ್‌, ‘ದೂರಿನಲ್ಲಿ ಮಹಿಳೆಯು ಆರೋಪಿಸಿರುವ ಪ್ರಕಾರ, ಕೃತ್ಯಗಳು ನಡೆದು ತುಂಬಾ ಸಮಯ ಆಗಿದೆ. 2018ರಲ್ಲಿ ನಡೆದ ಘಟನೆಗಳ ಬಗ್ಗೆ ಮಹಿಳೆ ಈಗ ದೂರು ನೀಡಿದ್ದಾರೆ. ಈ ಆರೋಪಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ. ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164ರಂತೆ ಹೇಳಿಕೆ ದಾಖಲಿಸಿಕೊಂಡು ಮುಂದುವರಿಯಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.