ADVERTISEMENT

ಹಿಂದೂ ಸಂತ್ರಸ್ತೆ ಯುವತಿಗೆ ನ್ಯಾಯ ಒದಗಿಸಿ: ಎಸ್‌ಡಿಪಿಐ ಪ್ರತಿಭಟನೆ

ವಿವಾಹ ಆಗುವುದಾಗಿ ಯುವತಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 6:01 IST
Last Updated 3 ಜುಲೈ 2025, 6:01 IST
ಯುವತಿಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿಸಿದ ಬಿಜೆಪಿ ಮುಖಂಡನ ವಂಚನೆ ಪ್ರಕರಣವನ್ನು ಖಂಡಿಸಿ ಮತ್ತು ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಬುಧವಾರ ಪುತ್ತೂರು ನಗರಸಭೆಯ ಎದುರು ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ ನಡೆಯಿತು.
ಯುವತಿಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿಸಿದ ಬಿಜೆಪಿ ಮುಖಂಡನ ವಂಚನೆ ಪ್ರಕರಣವನ್ನು ಖಂಡಿಸಿ ಮತ್ತು ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಬುಧವಾರ ಪುತ್ತೂರು ನಗರಸಭೆಯ ಎದುರು ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ ನಡೆಯಿತು.   

ಪುತ್ತೂರು: ನಗರದಲ್ಲಿ ಯುವತಿಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿ ಮಾಡಿ ವಂಚಿಸಿದ  ಪ್ರಕರಣವನ್ನು ಖಂಡಿಸಿ ಹಾಗೂ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪುತ್ತೂರು ನಗರಸಭೆಯ ಎದುರು ಬುಧವಾರ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನೀಶ್ ಅಲಿ ಬಂಟ್ವಾಳ, ‘ಹಿಂದು ನಾವೆಲ್ಲ ಒಂದು' ಎಂಬ ಘೋಷವಾಕ್ಯವು ರಾಜಕೀಯಕ್ಕೆ ಮಾತ್ರ ಸೀಮಿತವಾಗಿದೆ. ಒಬ್ಬ ತಾಯಿಗೆ ನ್ಯಾಯ ನೀಡಲು ಸಾಧ್ಯವಾಗದ ಸಂಘ ಪರಿವಾರದ ಮುಖಂಡರ ಅಸಲಿ ಬಣ್ಣ ಈಗ ಗೊತ್ತಾಗಿದೆ. ಇಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಲು ಒಂದೇ ಒಂದು ಹಿಂದೂ ಸಂಘಟನೆ ಇಲ್ಲ. ಬದಲಿಗೆ ಜಾತಿ- ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿವೆ ಎಂದು ಆರೋಪಿಸಿದರು.

‘ಇಲ್ಲಿನ ಹಿಂದೂ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಮಂಡ್ಯದಲ್ಲಿ ಸಂತ್ರಸ್ತೆಯ ಪರವಾಗಿ ಭಾಷಣ ಮಾಡಲು ಹೋಗುತ್ತಾರೆ. ಆದರೆ ಅವರಿಗೆ ತನ್ನ ಊರಲ್ಲೆ ನಡೆದ ಈ ಘಟನೆಯ ಬಗ್ಗೆ ಖಂಡಿಸಲು ಆಗುತ್ತಿಲ್ಲ. ಹಿಂದುತ್ವವಾದಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಇದೇ ಊರಿನ ಸಚಿವೆ ಶೋಭಾ ಕರಂದ್ಲಾಜೆ ಈಗ ಎಲ್ಲಿದ್ದಾರೆ. ಚಕ್ರವರ್ತಿ ಸೂಲಿಬೆಲೆ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಸಂಜೀವ ಮಠಂದೂರು ಅವರು ಯಾಕೆ ಸಂತ್ರೆಸ್ತೆಯ ಪರವಾಗಿ ನಿಂತಿಲ್ಲ. ಪೊಲೀಸರು ಆರೋಪಿಯನ್ನು ಯಾಕೆ ಬಂಧಿಸಿಲ್ಲ ಎಂದು ಅವರು ಪ್ರಶ್ನಿಸಿದರು.

ADVERTISEMENT

ಸಂತ್ರಸ್ತೆ ಯುವತಿಯ ತಾಯಿ ಮಾತನಾಡಿ, ನಾನು ಎಲ್ಲಾ ಸಮುದಾಯದ ಬಳಿಗೂ ಹೋಗಿದ್ದೇನೆ. ಎಲ್ಲರೂ ಮಗುವನ್ನು ತೆಗೆಸಿ ಎಂದು ಹೇಳಿದ್ದಾರೆಯೇ ಹೊರತು ವಿವಾಹ ಮಾಡಿಕೊಡಬೇಕೆಂದು ಯಾರೂ ಹೇಳಿಲ್ಲ. ಹುಡುಗನ ಅಪ್ಪನಲ್ಲಿ ಮಾತನಾಡಿದಾಗ ಅವರು ನಿಮ್ಮ ಮಗು ಬೇರೆ ಅಲ್ಲ, ನನ್ನ ಮಗು ಬೇರೆ ಅಲ್ಲ. ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದರು. ಆದರೆ ಇದೀಗ ಹುಡುಗನನ್ನು ಅವರ ಅಪ್ಪನೇ ಅಡಗಿಸಿಟ್ಟಿದ್ದಾರೆ. ನನಗೆ ನ್ಯಾಯ ಸಿಗದಾಗ ನಾನು ನನ್ನ ಮಗುವಿಗೆ ನ್ಯಾಯಕ್ಕಾಗಿ ಬೇಕಾದ ಸಂಘಟನೆಯಲ್ಲಿ ಕೇಳಿಕೊಂಡಿದ್ದೇನೆ. ನನ್ನ ಮಗಳ ಮಗುವಿಗೆ ತಂದೆಯ ಸ್ಥಾನ ಕೊಡಿಸಬೇಕು. ಆ ಹುಡುಗನೊಂದಿಗೆ ವಿವಾಹ ಮಾಡಿಸಬೇಕು ಎಂದು ಆಗ್ರಹಿಸಿದರು.

ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯೆ ಝೀನತ್ ಬಂಟ್ವಾಳ ಮಾತನಾಡಿ, ವಿಚಿತ್ರವಾದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಇಲ್ಲಿ ಅನ್ಯಾಯದ ವಿಷಯ ಬಂದಾಗ ಒಂದು ವರ್ಗವನ್ನು, ಧರ್ಮವನ್ನು ಗುರಿಯಾಗಿಸಿ ನ್ಯಾಯ ಕೊಡಲಾಗುತ್ತಿದೆ. ಅತ್ಯಾಚಾರ ಎಸಗಿದವನು ಮೇಲ್ವರ್ಗ, ಬಿಜೆಪಿ ಮುಖಂಡನಾಗಿದ್ದರೆ ಅಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುವುದಿಲ್ಲ. ಅದೇ ಸ್ಥಾನದಲ್ಲಿ ಯಾವುದೋ ಅಬ್ದುಲ್ಲ, ಜೋಸೆಫ್ ಆಗಿರುತ್ತಿದ್ದರೆ ಸಚಿವೆ ಶೋಭಾ ಕರಂದ್ಲಾಜೆ ಬರುತ್ತಿದ್ದರು. ಆದರೆ ಇಂದು ಅವರ‍್ಯಾರ ಸುಳಿವು ಇಲ್ಲ ಎಂದರು.

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಶ್ರಪ್ ಬಾವು, ಮುಖಂಡ ತಾಜುದ್ದಿನ್ ಸಾಲ್ಮರ, ಪುತ್ತೂರು ನಗರಸಭೆಯ ಸದಸ್ಯೆ ಪಾತಿಮಾತ್ ಝೋರಾ, ಪಕ್ಷದ ಪ್ರಮುಖರಾದ ಯಹ್ಯಾ ಕೂರ್ನಡ್ಕ, ಉಸ್ಮಾನ್ ಎ.ಕೆ, ಸಮೀರ್ ಕೂರ್ನಡ್ಕ, ಮುಸ್ತಫಾ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.