ADVERTISEMENT

ಪ್ರವೀಣ್ ನೆಟ್ಟಾರು ತಂದೆಯ ಹೇಳಿಕೆ ಆಧರಿಸಿ ತನಿಖೆ ನಡೆಯಲಿ: ಎಸ್‌ಡಿಪಿಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 16:41 IST
Last Updated 13 ಆಗಸ್ಟ್ 2022, 16:41 IST
ಪ್ರವೀಣ್ ನೆಟ್ಟಾರು
ಪ್ರವೀಣ್ ನೆಟ್ಟಾರು   

ಮಂಗಳೂರು: ‘ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ನಡೆದಾಗ ಅವರ ತಂದೆಯವರು ಕೆಲವು ಸ್ಥಳೀಯ ವ್ಯಕ್ತಿಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು. ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದಾಗಲೂ ಪ್ರಕರಣದ ತನಿಖೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಪೊಲೀಸರು ಪ್ರವೀಣ್‌ನ ತಂದೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು’ ಎಂದು ಎಸ್‌ಡಿಪಿಐ ಒತ್ತಾಯಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ‘ಪ್ರವೀಣ್‌ನ ಕೊಲೆಯ ಹಿಂದೆ ಬೇರೆಯೇ ಕಾರಣಗಳಿರುವ ಸಂಶಯವಿದೆ. ಪ್ರವೀಣ್‌ನ ಮೃತದೇಹ ನೋಡಲು ಪರಿಸರದ ಕೆಲವು ವ್ಯಕ್ತಿಗಳು ಬಾರದ ಬಗ್ಗೆ ಅವರ ತಂದೆಯು ಬಹಿರಂಗವಾಗಿ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ಅಥವಾ ಎನ್‌ಐಎ ಆ ಶಂಕಿತರನ್ನು ‌ವಿಚಾರಣೆಗೆ ಒಳಪಡಿಸಿಲ್ಲ. ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿದೆ’ ಎಂದು ಆರೋಪಿಸಿದರು.

‘ಸಂಘಟಿತ ಅಪರಾಧ ಕೃತ್ಯಗಳು ನಡೆದಾಗಲೆಲ್ಲ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಎಸ್‌ಡಿಪಿಐ ಮೇಲೆ ಗೂಬೆ ಕೂರಿಸುತ್ತಾರೆ. ಜಾತಿ, ಧರ್ಮದ ಆಧಾರದ ಮೇಲೆ ಆರೋಪ ಮಾಡಿ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ’ ಎಂದರು.

ADVERTISEMENT

‘ಬೆಳ್ಳಾರೆ ಬಳಿಯ ಕಳಂಜದ ಮಸೂದ್ ಹಾಗೂ ಕಾಟಿಪಳ್ಳ ಮಂಗಳಪೇಟೆಯ ಫಾಝಿಲ್ ಕೊಲೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಫಾಝಿಲ್ ಹತ್ಯೆ ಪ್ರಕರಣದಲ್ಲಿ ಬಜ್ಪೆ ಮತ್ತು ಬಂಟ್ವಾಳದ ಕೆಲ ವ್ಯಕ್ತಿಗಳು ಭಾಗಿಯಾದ ಬಗ್ಗೆ ಮಾಹಿತಿ ಇದ್ದರೂ ಸಮರ್ಪಕ ತನಿಖೆ ನಡೆಸಿಲ್ಲ. ಪ್ರವೀಣ್ ಕೊಲೆ ಪ್ರಕರಣದ ತನಿಖೆಯನ್ನು ಮಾತ್ರ ಎನ್‌ಐಎಗೆ ವಹಿಸಿ ತಾರತಮ್ಯ ಎಸಗಲಾಗಿದೆ. ಮಸೂದ್, ಫಾಝಿಲ್‌ರ ಜೀವಕ್ಕೆ ಬೆಲೆ ಇಲ್ಲವೇ’ ಎಂದು ಪ್ರಶ್ನಿಸಿದರು.

‘ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ, ಚರಣ್‌ರಾಜ್, ಕಾರ್ತಿಕ್ ಸುವರ್ಣ, ರಾಜೇಶ್‌ ಕೊಲೆ ಪ್ರಕರಣಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ (ಯುಎಪಿ) ಕಾಯ್ದೆಯಡಿ ಕ್ರಮ ಜರುಗಿಸಿಲ್ಲ. ತನಿಖೆಯನ್ನುಎನ್‌ಐಎಗೆ ವಹಿಸಿಯೂ ಇಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕ್ಕರ್ ಕುಳಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಸಮಿತಿಯ ಸದಸ್ಯ ಅಶ್ರಫ್ ಕೆ.ಸಿ.ರೋಡ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.