ADVERTISEMENT

ಶರಬತ್ ಕಟ್ಟೆ ಭದ್ರಕಾಳಿ ದೇವಸ್ಥಾನ ಬ್ರಹ್ಮಕಲಶೋತ್ಸವ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 4:42 IST
Last Updated 27 ಫೆಬ್ರುವರಿ 2024, 4:42 IST
ನಗರದ ಶರಬತ್ ಕಟ್ಟೆಯ ಭದ್ರಕಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಹ್ವಾನ ಪತ್ರಿಕೆಯನ್ನು ಮೋಹನ ಕೊಪ್ಪಲ, ಶ್ರೇಯಸ್‌ ಜೋಗಿ, ಉಮೇಶ್‌ನಾಥ್‌, ರಾಜೇಶ್‌ ಕದ್ರಿ ಹಾಗೂ ರಿತೇಶ್‌ದಾಸ್‌ ಕೊಪ್ಪಲಕಾಡು ಅವರು ಸೋಮವಾರ ಬಿಡುಗಡೆ ಮಾಡಿದರು
ನಗರದ ಶರಬತ್ ಕಟ್ಟೆಯ ಭದ್ರಕಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಹ್ವಾನ ಪತ್ರಿಕೆಯನ್ನು ಮೋಹನ ಕೊಪ್ಪಲ, ಶ್ರೇಯಸ್‌ ಜೋಗಿ, ಉಮೇಶ್‌ನಾಥ್‌, ರಾಜೇಶ್‌ ಕದ್ರಿ ಹಾಗೂ ರಿತೇಶ್‌ದಾಸ್‌ ಕೊಪ್ಪಲಕಾಡು ಅವರು ಸೋಮವಾರ ಬಿಡುಗಡೆ ಮಾಡಿದರು   

ಮಂಗಳೂರು: ಕದ್ರಿ ಪದವು, ಶರಬತ್‌ ಕಟ್ಟೆಯ ಭದ್ರಕಾಳಿ ದೇವಸ್ಥಾನದ ಪುನಃಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ‌ ಕಾರ್ಯಕ್ರಮಗಳು ಇದೇ 28 ರಿಂದ ಮಾರ್ಚ್ 1ರವರೆಗೆ ನಡೆಯಲಿವೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ದೇವಸ್ಥಾನದ ಪ್ರಧಾನ ಅರ್ಚಕ ಉಮೇಶ್ ನಾಥ್, 'ಕದ್ರಿ ಯೋಗೀಶ್ವರ ಮಠದ ನಿರ್ಮಲನಾಥ ಅವರ ಉಪಸ್ಥಿತಿಯಲ್ಲಿ ದೇರೆಬೈಲ್ ವಿಠಲ ದಾಸ್ ತಂತ್ರಿಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿಗಳು ನೆರವೇರಲಿವೆ’ ಎಂದರು.

'ದಟ್ಟ ಕಾಡಿನಿಂದ ಕೂಡಿದ್ದ ಈ ಭಾಗದಲ್ಲಿ ಸಾಗರದ ವರದಹಳ್ಳಿಯ ಶ್ರೀಧರ ಸ್ವಾಮೀಜಿ ಭಕ್ತರೊಂದಿಗೆ ಸಂಚರಿಸುತ್ತಿದ್ದಾಗ ಇಲ್ಲಿ ಅಗೋಚರ ಶಕ್ತಿಯು ನೆಲೆ ಇರುವುದನ್ನು ಗ್ರಹಿಸಿದ್ದರು. ಚಾತುರ್ಮಾಸ್ಯ ವ್ರತ ಕೈಗೊಂಡ ಸಂದರ್ಭದಲ್ಲಿ ಇದೇ ಸ್ಥಳದಲ್ಲಿ ತಾಯಿ ಭದ್ರಕಾಳಿಯು ಕನಸಿನಲ್ಲಿ ಬಂದು ಗುಡಿ ನಿರ್ಮಿಸಲು ಆಜ್ಞಾಪಿಸಿದ್ದಳು. ಅಲ್ಲಿಯವರೆಗೆ ಇಲ್ಲಿ ಮರದಲ್ಲೇ ದೇವಿಯ ನೆಲೆ ಇತ್ತು. 1967ರಲ್ಲಿ ಕದ್ರಿ ಯೋಗೀಶ್ವರ ಮಠದ ಶಾಂತಿನಾಥ್ ಜಿ ಅವರ ಕಾಲಾವಧಿಯಲ್ಲಿ ಸುಂದರವಾದ ಗುಡಿಯ ನಿರ್ಮಾಣವಾಗಿತ್ತು' ಎಂದರು.

ADVERTISEMENT

'ನನ್ನ ಆಶಯದಂತೆ ಸುಮಾರು ₹ 2.5 ಕೋಟಿ ಮೊತ್ತದಲ್ಲಿ‌ ದೇವಸ್ಥಾನ ನವೀಕರಣಗೊಂಡಿದೆ. ಶಿರಾ ಶಿಲೆ ಕಲ್ಲು, ತಾಮ್ರ ಹಾಗೂ ಮರಗಳನ್ನು ಬಳಸಿ ವಾಸ್ತು ಪ್ರಕಾರ ಗುಡಿಯ ವಿನ್ಯಾಸಗೊಳಿಸಲಾಗಿದೆ. ಇದೇ 28 ರಂದು ಸಂಜೆ‌ 5 ರಿಂದ ಉಗ್ರಾಣ ಮುಹೂರ್ತ, ಸಂಜೆ 7 ರಿಂದ ಧಾರ್ಮಿಕ ಸಭೆ, ಇದೇ 29ರಂದು ಬೆಳಿಗ್ಗೆ 11.45ಕ್ಕೆ ಭದ್ರಕಾಳಿ ವಿಗ್ರಹ ಪ್ರತಿಷ್ಠೆ, ಸಂಜೆ 7 ರಿಂದ ಧಾರ್ಮಿಕ ಸಭೆ, ಮಾರ್ಚ್ 1 ರಂದು ಬೆಳಿಗ್ಗೆ 7.43ಕ್ಕೆ ಬ್ರಹ್ಮಕಲಶಾಭಿಷೇಕ ಚಂಡಿಕಾ ಯಾಗ, ಮಹಾಪೂಜೆ ಮತ್ತು ಸಂಜೆ 7 ರಿಂದ ಧಾರ್ಮಿಕ ಸಭೆ ನಡೆಯಲಿವೆ' ಎಂದರು.

ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿ ಅಧ್ಯಕ್ಷ ರಾಜೇಶ್ ಕದ್ರಿ, ಧಾರ್ಮಿಕ ಕಾರ್ಯಕ್ರಮದ ಸಂಘಟಕ ರಿತೇಶ್ ದಾಸ್ ಕೊಪ್ಪಳಕಾಡು, ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕ ಮೋಹನ‌ ಕೊಪ್ಪಳ, ಬ್ರಹ್ಮಕಲಶೋತ್ಸವ ಸಮಿತಿ ಮೇಲುಸ್ತುವಾರಿ ಶ್ರೇಯಸ್ ಜೋಗಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.