ಹಿಂದೂಯೇತರರ ವ್ಯಾಪಾರಕ್ಕೆ ಅವಕಾಶ ನಿರಾಕರಣೆ
ಮಂಗಳೂರು: ಇಲ್ಲಿಗೆ ಸಮೀಪದ ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಇದೇ 14ರಿಂದ 19ವರೆಗೆ ಜಾತ್ರೆ ನಡೆಯಲಿದ್ದು, ಇದರ ವ್ಯಾಪಾರದಲ್ಲಿ ಹಿಂದೂಯೇತರರಿಗೆ ಅವಕಾಶ ಕಲ್ಪಿಸಿಲ್ಲ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
‘ಕಾಂಗ್ರೆಸ್ ನೇತೃತ್ವದ ಸರ್ಕಾರವೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದಿಗಳ ಕಪಿಮುಷ್ಟಿಯಲ್ಲಿ ನಲುಗುತ್ತಿದೆ. ಬಡ ಸಂತೆ ವ್ಯಾಪಾರಿಗಳ ಜೊತೆ ನಿಲ್ಲಲಾಗದ ಈ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ’ ಎಂದು ಸಮನ್ವಯ ಸಮಿತಿ ತಿಳಿಸಿದೆ.
‘ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕುಡುಪು ದೇವಸ್ಥಾನದ ಷಷ್ಠಿ ಜಾತ್ರೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಪ್ರಾಂಗಣದ ಹೊರಗಡೆ ಸಂತೆ ವ್ಯಾಪಾರ ನಡೆಯುತ್ತದೆ. ಇಲ್ಲೂ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವಾಗ ಧಾರ್ಮಿಕ ತಾರತಮ್ಯ ನಡೆಸಲಾಗುತ್ತಿದೆ. ಜಾತ್ರೆಗಳನ್ನೇ ನಂಬಿ ಬದುಕುವ ಬಡ ಸಂತೆ ವ್ಯಾಪಾರಿಗಳ ಬದುಕುವ ಹಕ್ಕನ್ನು ರಕ್ಷಿಸಲು ಮತ್ತೆ ಜಿಲ್ಲಾಡಳಿತ ವಿಫಲ ಆಗಿದೆ’ ಎಂದು ಸಮನ್ವಯ ಸಮಿತಿಯ ಸಂಚಾಲಕ ಬಿ.ಕೆ.ಇಮ್ತಿಯಾಜ್ ಆರೋಪಿಸಿದರು.
‘ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಇಲ್ಲಿ ಟೆಂಡರ್ ನೀಡಲಾಗುತ್ತಿದೆ. ಅವರು ಹಿಂದೂಯೇತರರಿಗೆ ವ್ಯಾಪಾರಿ ಮಳಿಗೆಗಳನ್ನು ಹಾಕಲು ಅವಕಾಶ ನೀಡುವುದಿಲ್ಲ’ ಎಂದು ಅವರು ದೂರಿದರು.
‘ದೇವಸ್ಥಾನದ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಮಳಿಗೆಗಳನ್ನು ಹಾಕಿ ಜಾತ್ರೆ ವ್ಯಾಪಾರ ನಡೆಸುವುದಕ್ಕೆ ಪ್ರತಿ ವರ್ಷದಂತೆಯೇ ಈ ವರ್ಷವೂ ಟೆಂಡರ್ ಕರೆದೇ ಜಾಗ ಒದಗಿಸಿದ್ದೇವೆ. ಡಿ. 5ರಂದು ನಡೆದ ಹರಾಜಿನಲ್ಲಿ ಐವರು ಭಾಗವಹಿಸಿದ್ದರು. ಹೆಚ್ಚು ಮೊತ್ತ ನೀಡಿದವರಿಗೆ ಮಳಿಗೆ ಹಾಕಲು ಜಾಗ ಒದಗಿಸಿದ್ದೇವೆ. ನವೀನ್ ಎಂಬುವವರು ₹ 1.15 ಲಕ್ಷ ಮೊತ್ತಕ್ಕೆ ಟೆಂಡರ್ ವಹಿಸಿಕೊಂಡಿದ್ದಾರೆ. ಹಿಂದಿನಿಂದಲೂ ಇಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಇಲ್ಲಿ ಮಳಿಗೆ ಹಾಕಲು ಅವಕಾಶ ನೀಡುತ್ತಿರಲಿಲ್ಲ. ಈ ವರ್ಷವೂ ಟೆಂಡರ್ ನೋಟಿಸ್‌ನಲ್ಲೂ ಇದನ್ನು ಸ್ಪಷ್ಟಪಡಿಸಲಾಗಿತ್ತು’ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಇದೇ 17 ಮತ್ತು 18ರಂದು ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ನಡೆಯುತ್ತದೆ. ಇದೇ 14ರಿಂದ 19ರವರೆಗೂ ಈ ದೇವಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.