ಮಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡುವ, ದ್ವೇಷ ಭಾವನೆ ಮೂಡಿಸಿ, ಶಾಂತಿ, ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ಕೆಲವು ವ್ಯಕ್ತಿಗಳು, ಗ್ರೂಪ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ಸೋಮವಾರ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಬಜಪೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಮನೀಶ್ ಎಸ್ ಎಂಬುವವರು ‘ನಮ್ಮ ಕಾರ್ಯಕರ್ತನಾದ ಸುಹಾಸ್ ಬಜಪೆಯ ಹತ್ಯೆಯನ್ನು ಖಂಡಿಸಿ ಇಂದು (ಮೇ 2) ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದ.ಕ ಜಿಲ್ಲೆ ಸಂರ್ಪೂರ್ಣ ಬಂದ್. ಸುಹಾಸ್ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲವನ್ನು ಈಗ ತೋರಿಸದೇ ಇದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ. ಹಿಂದೂ ಸಾಗರದ ಬಿಂದು ಬಿಂದುಗಳೇ ಒಟ್ಟಾಗೋಣ, ಬಲಿದಾನ ವ್ಯರ್ಥವಾಗದಿರಲಿ’ ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಆಧಾರದಲ್ಲಿ ಬಿಎನ್‌ಎಸ್ ಕಲಂ 192ರ ಅಡಿಯಲ್ಲಿ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪುತ್ತೂರಿನ ಮನೀಶ್ ಎಂಬಾತನ ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಫೇಸ್‌ಬುಕ್‌ನಲ್ಲಿ ವಿಕಾಸ್ ಪಿ. ಎಂಬ ಖಾತೆಯಲ್ಲಿ ‘ಸುಹಾಸ್ ಶೆಟ್ಟಿ ಹತ್ಯೆಯ ಪ್ರಮುಖ ರೂವಾರಿ, ಎ1 ಆರೋಪಿ ಮಂಗಳೂರಿನ ಆದಿಲ್ ಮನೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರು ಸಂಚು ರೂಪಿಸುತ್ತಿರುವುದು’ ಎಂಬುದಾಗಿ ಹಳೆಯ ಫೋಟೊ ಬಳಸಿ, ಸುಳ್ಳು ಮಾಹಿತಿ ಪೋಸ್ಟ್ ಮಾಡಲಾಗಿದೆ. ಈ ಫೇಸ್‌ಬುಕ್ ಖಾತೆದಾರನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
‘ಶಾಕಿಂಗ್: ಮಂಗಳೂರು ಕೊಲೆ ಪ್ರಕರಣದ ಆರೋಪಿ ಆದಿಲ್, ತಮ್ಮ ಸಹೋದರ ಫಾಝಿಲ್ ಮೃತಪಟ್ಟಾಗ ರಾಜ್ಯ ಸರ್ಕಾರ ನೀಡಿದ್ದ ಪರಿಹಾರ ಮೊತ್ತವನ್ನು ಸುಹಾಸ್ ಶೆಟ್ಟಿ ಹತ್ಯೆಗೆ ಬಳಸಿಕೊಂಡು ಸೇಡು ತೀರಿಸಿಕೊಂಡಿದ್ದಾನೆ. ಸುಹಾಸ್ ಕೊಲೆ ಮಾಡಲು ಆರೋಪಿ ಸಫ್ವಾನ್‌ಗೆ ₹3 ಲಕ್ಷ ವನ್ನು ಸರ್ಕಾರದಿಂದ ಪಡೆದ ಪರಿಹಾರ ಪ್ಯಾಕೇಜ್‌ನ ₹25 ಲಕ್ಷ ಮೊತ್ತದಿಂದ ನೀಡಲಾಗಿದೆ ಎಂಬ ಸಂಗತಿ ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ’ – ಹೀಗೆಂದು ರಾಹುಲ್ ಶಿವಶಂಕರ್ ಎಂಬ X ಖಾತೆಯಲ್ಲಿ ಪೋಸ್ಟ್ ಆಗಿತ್ತು. ಈ ಸುಳ್ಳು ಸುದ್ದಿ ಹರಡಿದ ವ್ಯಕ್ತಿ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿ, ಭಾರತೀಯ ನ್ಯಾಯ ಸಂಹಿತೆಯ ಕಲಂ 196, 351 (2), 352ರ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ಅಗ್ರವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.