ADVERTISEMENT

ಪಡಿತರ ವಿತರಣೆಯಲ್ಲಿ ಸರ್ಕಾರ ವಿಫಲ

ಲಸಿಕೆ ನೀಡುವುದನ್ನು ವಿರೋಧಿಸಿಲ್ಲ: ಶಾಸಕ ಖಾದರ್‌

​ಪ್ರಜಾವಾಣಿ ವಾರ್ತೆ
Published 20 ಮೇ 2021, 4:19 IST
Last Updated 20 ಮೇ 2021, 4:19 IST
ಯು.ಟಿ. ಖಾದರ್‌
ಯು.ಟಿ. ಖಾದರ್‌   

ಮಂಗಳೂರು: ರಾಜ್ಯದಲ್ಲಿ ಪಡಿತರ ವ್ಯವಸ್ಥೆ ಅಸಮರ್ಪಕವಾಗಿದ್ದು, ಜನರಿಗೆ ಪಡಿತರ ಸಾಮಗ್ರಿಗಳನ್ನು ವಿತರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಜನರು ಎದು ರಿಸುತ್ತಿರುವ ಸಮಸ್ಯೆಯನ್ನು ಸರ್ಕಾರ ಕೂಡಲೇ ಸರಿಪಡಿಸಬೇಕು ಎಂದು ಶಾಸಕ ಯು.ಟಿ.ಖಾದರ್‌ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ ಸಂಕಷ್ಟದ ಕಾಲದಲ್ಲಿ ಜನರಿಗೆ ಸಮರ್ಪಕವಾದ ಪಡಿತರ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಇದರಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸೂಕ್ತ ಕಾರಣಗಳಿಲ್ಲದೇ ಪಡಿತರ ಚೀಟಿ ರದ್ದುಗೊಳಿಸಲಾಗುತ್ತಿದೆ ಎಂದರು.

ಜನರಿಗೆ ಪೌಷ್ಟಿಕ ಆಹಾರ ಧಾನ್ಯ, ಕುಚ್ಚಲಕ್ಕಿ ಸಿಗುತ್ತಿಲ್ಲ. ಪಡಿತರ ಚೀಟಿಯ ಮೂಲಕ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಸಾಮಗ್ರಿಯನ್ನು ಪಡೆಯುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ ಕಾರಣ, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಜನರಿಗೆ ಈ ಸಮಸ್ಯೆ ಇರಲಿಲ್ಲ ಎಂದು ಹೇಳಿದರು.

ADVERTISEMENT

ಶಾಸಕರು, ಸಚಿವರಿಗೇನು ಕೆಲಸ?: ಈ ಸಂಕಷ್ಟದ ಸಂದರ್ಭ ಜಿಲ್ಲಾಧಿಕಾರಿಗೆ ಎಲ್ಲ ಅಧಿಕಾರ ನೀಡಿದರೆ ಸಚಿವರು, ಶಾಸಕರಿಗೆ ಏನಿದೆ ಕೆಲಸ? ಜಿಲ್ಲಾಧಿಕಾರಿಗೆ ಹೆಚ್ಚಿನ ಅಧಿಕಾರ ಎಂದು ಹೇಳುವ ಮೂಲಕ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ದೂರಿದರು.

ಕೋವಿಡ್ ಬಾಧಿತರಿಗೆ ಉಚಿತ ಚಿಕಿತ್ಸೆ ನೀಡುವತ್ತ ಸರ್ಕಾರ ಗಮನಹರಿಸಬೇಕು. ಆದರೆ, ಈಗ ಒಂದೊಂದು ಆಸ್ಪತ್ರೆಗಳಲ್ಲಿ ಒಂದೊಂದು ರೀತಿಯ ಶುಲ್ಕ ವಿಧಿಸಲಾಗಿದೆ ಎಂದರು.

‘ನಾನು ಲಸಿಕೆ ನೀಡುವುದನ್ನು ಎಂದಿಗೂ ವಿರೋಧಿಸಲಿಲ್ಲ. ಆದರೆ, ಮೊದಲು ಬಿಜೆಪಿ ಪ್ರತಿನಿಧಿಗಳು ಲಸಿಕೆ ತೆಗೆದುಕೊಂಡು ಜನರಲ್ಲಿ ವಿಶ್ವಾಸ ಮೂಡಿಸಬೇಕಿತ್ತು. ಸರ್ಕಾರವು ಜನರಿಗೆ ಸಾಕಷ್ಟು ಲಸಿಕೆಗಳನ್ನು ಪೂರೈಕೆ ಮಾಡ ಬೇಕಿತ್ತು. ಅದರ ಬದಲು ಆರೋಪ ಗಳನ್ನು ಮಾಡುತ್ತಿದ್ದಾರೆ. ಎಲ್ಲರಿಗೆ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳದ ಕಾರಣ ಜನರು ಲಸಿಕೆಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌, ಸತೀಶ್‌ ಶೆಟ್ಟಿ, ರಫೀಕ್‌, ರಮ್ಲಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.