ADVERTISEMENT

ಸುಳ್ಯ: ಗುಡ್ಡ ಕುಸಿತ– ಕೆಲಸ ನಿರತ ಮೂವರು ಕಾರ್ಮಿಕರು ಸಾವು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 11:23 IST
Last Updated 25 ಮಾರ್ಚ್ 2023, 11:23 IST
ಸುಳ್ಯದಲ್ಲಿ ಗುಡ್ಡ ಕುಸಿದ ಸ್ಥಳದಲ್ಲಿ ಜೆಸಿಬಿಯಲ್ಲಿ ಮಣ್ಣನ್ನು ಸರಿಸಲಾಯಿತು
ಸುಳ್ಯದಲ್ಲಿ ಗುಡ್ಡ ಕುಸಿದ ಸ್ಥಳದಲ್ಲಿ ಜೆಸಿಬಿಯಲ್ಲಿ ಮಣ್ಣನ್ನು ಸರಿಸಲಾಯಿತು   

ಸುಳ್ಯ: ಪಟ್ಟಣದ ಗುರುಂಪು ಎಂಬಲ್ಲಿ ಗುಡ್ಡ ಕುಸಿದು, ಒಬ್ಬ ಮಹಿಳೆ ಸೇರಿದಂತೆ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಶನಿವಾರ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಮಣ್ಣಿನಿಂದ ಮೂವರು ಕಾರ್ಮಿಕರ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.

ಮೃತರಲ್ಲಿ ಗದಗದ ಮುಂಡರಗಿ ಮೂಲದ ಸೋಮಶೇಖರ– ಶಾಂತಾ ದಂಪತಿ ಸೇರಿದ್ದಾರೆ. ಮೃತಪಟ್ಟ ಇನ್ನೊಬ್ಬ ಯುವಕನ ಗುರುತು, ವಿಳಾಸ ತಿಳಿದುಬಂದಿಲ್ಲ.

ADVERTISEMENT

ಅಬೂಬಕ್ಕರ್ ಎಂಬವರ ಮನೆಯ ಹಿಂದೆ ಬೃಹತ್ತಾದ ಗುಡ್ಡವನ್ನು ಕಡಿಯಲಾಗಿತ್ತು. ಅದರ ಕೆಳಗೆ ಪಿಲ್ಲರ್‌ ಹಾಕಿ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿತ್ತು. ಮೂವರು ಕಾರ್ಮಿಕರು ಈ ಕೆಲಸದಲ್ಲಿ ನಿರತರಾಗಿದ್ದರು. ಆಗ ಮೇಲಿನಿಂದ ಗುಡ್ಡದ ಮಣ್ಣು ಕುಸಿದು ಬಿದ್ದು, ಕಾರ್ಮಿಕರು ಅದರಡಿ ಸಿಲುಕಿದರು. ಪಕ್ಕದಲ್ಲಿಯೇ ಕೆಲಸ ಮಾಡುತ್ತಿದ್ದ ಇನ್ನೊಂದು ಜೆಸಿಬಿಯನ್ನು ತರಿಸಿ ಮಣ್ಣನನ್ನು ತೆರವುಗೊಳಿಸಲಾಯಿತು. ಒಂದೂವರೆ ಗಂಟೆಯ ಕಾರ್ಯಾಚರಣೆ ಬಳಿಕ ಮೂವರ ದೇಹಗಳನ್ನು ಹೊರತೆಗೆಯಲಾಗಿತ್ತು. ಆದರೆ ಅಷ್ಟರಲ್ಲಿ ಕಾರ್ಮಿಕರು ಅಸುನೀಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತದೇಹಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಸಚಿವ ಎಸ್.ಅಂಗಾರ, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಸುಶೀಲಾ ಜಿನ್ನಪ್ಪ, ತಹಶೀಲ್ದಾರ್ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ನಗರ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.