ADVERTISEMENT

ದಕ್ಷಿಣ ಕನ್ನಡ: ಕೋವಿಡ್ ಪಾಸಿಟಿವಿಟಿ ದರ ಶೇ 10ಕ್ಕೆ ಏರಿಕೆ

ಜಿಲ್ಲೆಯಲ್ಲಿ ಮತ್ತೆ ಹೆಚ್ಚಿದ ಕೋವಿಡ್ ಪ್ರಕರಣ, ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 3:42 IST
Last Updated 19 ಜೂನ್ 2021, 3:42 IST
ವಿಟ್ಲ ಪೇಟೆಗೆ ಬರುವ ಜನರನ್ನು ಶುಕ್ರವಾರ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು.
ವಿಟ್ಲ ಪೇಟೆಗೆ ಬರುವ ಜನರನ್ನು ಶುಕ್ರವಾರ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು.   

ಮಂಗಳೂರು: ಕಳೆದ ಕೆಲದಿನಗಳಿಂದ ಇಳಿಕೆಯಾಗಿದ್ದ ಕೋವಿಡ್–19 ಪ್ರಕರಣಗಳ ಸಂಖ್ಯೆ ಶುಕ್ರವಾರ ಮತ್ತೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಶುಕ್ರವಾರ 1,006 ಜನರಿಗೆ ಕೋವಿಡ್–19 ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ 10.07ಕ್ಕೆ ಏರಿದೆ.

ಗುರುವಾರ ಶೇ 7.17ರಷ್ಟಿದ್ದ ಪಾಸಿಟಿವಿಟಿ ದರ ಶುಕ್ರವಾರ ಶೇ 3ರಷ್ಟು ಹೆಚ್ಚಳವಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕವನ್ನು ಪತ್ತೆ ಮಾಡಿ, ತಪಾಸಣೆ ನಡೆಸಲಾಗುತ್ತಿದೆ. ಇದರಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟಿರುವ 15 ಮಂದಿಗೆ ಕೋವಿಡ್–19 ಇರುವುದು ಶುಕ್ರವಾರ ದೃಢಪಟ್ಟಿದೆ. ಸಾವಿನ ಸಂಖ್ಯೆ ಈಗಾಗಲೇ ಸಾವಿರದ ಗಡಿ ದಾಟಿದ್ದು, ಇದುವರೆಗೆ 1,024 ಜನರು ಮೃತಪಟ್ಟಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಕೋವಿಡ್–19 ನಿಯಂತ್ರಣಕ್ಕಾಗಿ ಈಗಾಗಲೇ ಜಿಲ್ಲಾಡಳಿತ 17 ಗ್ರಾಮ ಪಂಚಾಯಿತಿಗಳಲ್ಲಿ ಜೂನ್‌ 21 ರವರೆಗೆ ಲಾಕ್‌ಡೌನ್‌ ವಿಧಿಸಿದೆ. 50ಕ್ಕಿಂತ ಅಧಿಕ ಪ್ರಕರಣಗಳು ಇರುವ ಪಂಚಾಯಿತಿಗಳಲ್ಲಿ ಲಾಕ್‌ಡೌನ್‌ ಮಾಡಲಾಗಿದ್ದು, ಈ ವ್ಯಾಪ್ತಿಯಲ್ಲಿ ತಪಾಸಣೆಯನ್ನು ಹೆಚ್ಚಿಸಲಾಗಿದೆ.

ಮನೆಯಲ್ಲಿಯೇ ಐಸೋಲೇಷನ್‌ನಲ್ಲಿ ಇರುವವರಿಗೆ ಪ್ರತ್ಯೇಕ ಸೌಲಭ್ಯ ಇಲ್ಲದೇ ಇರುವುದರಿಂದ ಸೋಂಕು ಹರಡುತ್ತಿದ್ದು, ಇದನ್ನು ನಿವಾರಿಸಲು ಕೋವಿಡ್ ಆರೈಕೆ ಕೇಂದ್ರಗಳಿಗೆ ಜನರನ್ನು ದಾಖಲಿಸಲಾಗುತ್ತಿದೆ. ವೈದ್ಯರ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದ ಮೂಲಕ ಗ್ರಾಮಗಳಿಗೆ ತೆರಳಿ ಗಂಟಲು ದ್ರವ ಸಂಗ್ರಹಿಸಲಾಗುತ್ತಿದೆ.

ಲಾಕ್‌ಡೌನ್‌ ವಿಸ್ತರಣೆ ಸಾಧ್ಯತೆ: ಪಾಸಿಟಿವಿಟಿ ದರವನ್ನು ಶೇ 5ಕ್ಕಿಂತ ಕೆಳಗಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದ್ದು, ಪಾಸಿಟಿವಿಟಿ ದರ ಹೆಚ್ಚಾಗಿರುವ ದಕ್ಷಿಣ ಕನ್ನಡ ಸೇರಿದಂತೆ 11 ಜಿಲ್ಲೆಗಳಲ್ಲಿ ಒಂದು ವಾರ ಲಾಕ್‌ಡೌನ್‌ ವಿಸ್ತರಿಸಲಾಗಿದೆ.

ಇದೀಗ ಪಾಸಿಟಿವಿಟಿ ದರವನ್ನು ಶೇ 5ಕ್ಕಿಂತ ಕಡಿಮೆ ಮಾಡುವುದು ಅನಿವಾರ್ಯವಾಗಿದ್ದು, ಅಲ್ಲಿಯವರೆಗೆ ಲಾಕ್‌ಡೌನ್‌ ವಿಸ್ತರಣೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ವಾರ ವಿಸ್ತರಣೆ ಆಗಬಹುದು ಎಂದು ಹೇಳಲಾಗುತ್ತಿದೆ.

ಚೆನ್ನೈತೋಡಿಯಲ್ಲಿ ಮತ್ತೆ 36 ಪ್ರಕರಣ: ಬಂಟ್ವಾಳ ತಾಲ್ಲೂಕಿನಲ್ಲಿ ಶುಕ್ರವಾರ 120ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಲಾಕ್‌ಡೌನ್‌ ಘೋಷಿಸಿರುವ ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 36 ಪ್ರಕರಣ ದೃಢವಾಗಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ ಅಧ್ಯಕ್ಷತೆಯ ಕಾರ್ಯಪಡೆಯ ಸಭೆ ನಿರ್ಧರಿಸಿದೆ.

ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಪರೀಕ್ಷೆ ಹೆಚ್ಚಿಸಲಾಗಿದೆ. ಶುಕ್ರವಾರ 132 ಜನರ ಗಂಟಲು ದ್ರವವನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ. ಪಟ್ಟಣಕ್ಕೆ ಪ್ರವೇಶಿಸುವವರಿಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.

ಕಪ್ಪು ಶಿಲೀಂಧ್ರ: ಮತ್ತೆ 2 ಪ್ರಕರಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಕಪ್ಪು ಶಿಲೀಂಧ್ರದ ಎರಡು ಪ್ರಕರಣಗಳು ಪತ್ತೆಯಾಗಿವೆ. ಈ ಎರಡೂ ಪ್ರಕರಣಗಳು ಬೇರೆ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿವೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸದ್ಯ 39 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ ದಕ್ಷಿಣ ಕನ್ನಡದ 10 ಮತ್ತು ಹೊರ ಜಿಲ್ಲೆಯ 29 ಪ್ರಕರಣಗಳು ಸೇರಿವೆ. ಶುಕ್ರವಾರ ಇಬ್ಬರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕಪ್ಪು ಶಿಲೀಂಧ್ರ ಸೋಂಕಿನಿಂದ 16 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡದ ಇಬ್ಬರು ಮತ್ತು ಹೊರ ಜಿಲ್ಲೆಯ 14 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್‌ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.