ADVERTISEMENT

ಮಂಗಳೂರು: ‘ತೈಲ ಬೆಲೆ ಇಳಿಸದಿದ್ದರೆ ಪ್ರತಿಭಟನೆ ಅನಿವಾರ್ಯ’

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 16:35 IST
Last Updated 26 ಜೂನ್ 2020, 16:35 IST

ಮಂಗಳೂರು: ಲಾಕ್‌ಡೌನ್‌ನಿಂದ ಈಗಾಗಲೇ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರು ಹಾಗೂ ಮಾಲೀಕರು ತತ್ತರಿಸಿದ್ದು, ಇದೀಗ ತೈಲ ಬೆಲೆ ಏರಿಕೆಯಿಂದ ಜೀವನವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೈಲ ಬೆಲೆ ನಿಯಂತ್ರಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಎಚ್ಚರಿಕೆ ನೀಡಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ದಿನೇಶ್ ಕುಂಪಲ ಎಂ., ಲಾಕ್‌ಡೌನ್ ಸಂದರ್ಭ ಪರಿಹಾರವಾಗಿ ಸರ್ಕಾರ ಘೋಷಣೆ ಮಾಡಿರುವಂತೆ ಟ್ಯಾಕ್ಸಿ ಚಾಲರಿಗೆ ₹5 ಸಾವಿರವನ್ನು ಎಲ್‌ಎಂವಿ ಬ್ಯಾಡ್ಜ್ ಹೊಂದಿರುವ ಎಲ್ಲ ಚಾಲಕರಿಗೂ ಒದಗಿಸಬೇಕು ಎಂದು ಒತ್ತಾಯಿಸಿದರು.

ನಾಲ್ಕು ತಿಂಗಳಿಂದ ವಾಹನಗಳು ರಸ್ತೆಗಿಳಿದಿಲ್ಲ. ಇದೀಗ ರಸ್ತೆಗಿಳಿದರೂ ಬಾಡಿಗೆ ವಿರಳವಾಗಿದೆ. ಈ ಸಂದರ್ಭದಲ್ಲಿ ಆರ್‌ಬಿಐ ಮೂಲಕ ಬ್ಯಾಂಕ್‌ಗಳಿಗೆ ಯಾವುದೇ ಸಾಲ ವಸೂಲಿಗೆ ಒತ್ತಾಯ ಮಾಡದಂತೆ ಸೂಚನೆ ನೀಡಿದೆ. ಬ್ಯಾಂಕ್‌ಗಳು ಮಾತ್ರ ವಾಹನಗಳ ಮಾಲೀಕರಿಗೆ ಕರೆ ಮಾಡಿ ಸಾಲ ವಸೂಲಾತಿಗೆ ಒತ್ತಾಯಿಸುತ್ತಿವೆ. ಈ ಬಗ್ಗೆ ಸರ್ಕಾರ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಅಧಿಸೂಚನೆ ನೀಡಬೇಕು. ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ವಾಹನಗಳಿಗೆ ಮುಂದಿನ ಆರು ತಿಂಗಳ ಕಾಲ ತೆರಿಗೆ ಹಾಗೂ ವಿಮೆಯಿಂದ ವಿನಾಯಿತಿ ನೀಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಪ್ರಧಾನ ಕಾರ್ಯದರ್ಶಿ ಆನಂದ್ ಕೆ., ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಕುತ್ತಾರು, ದಿನೇಶ್ ಮಂಗಳಾದೇವಿ, ಸುರೇಶ್ ಸುರತ್ಕಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.