ADVERTISEMENT

ಬೆಳ್ತಂಗಡಿ | ಕಷ್ಟ ಸುಖಗಳಿಗೆ ಒಕ್ಕೂಟ ಸದಾ ಸ್ಪಂದನೆ: ಉದಯ ಕೋಟ್ಯಾನ್

ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 4:04 IST
Last Updated 27 ಜೂನ್ 2025, 4:04 IST
ಬೆಳ್ತಂಗಡಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗುರುವಾರ ನಡೆದ ವಿಶೇಷ ತರಬೇತಿ ಶಿಬಿರವನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಕೋಟ್ಯಾನ್ ಉದ್ಘಾಟಿಸಿದರು
ಬೆಳ್ತಂಗಡಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗುರುವಾರ ನಡೆದ ವಿಶೇಷ ತರಬೇತಿ ಶಿಬಿರವನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಕೋಟ್ಯಾನ್ ಉದ್ಘಾಟಿಸಿದರು   

ಬೆಳ್ತಂಗಡಿ: ‘ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಯಾವುದೇ ಕಷ್ಟ ಸುಖಗಳಿಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಸ್ಪಂದಿಸಲು ಬದ್ಧವಾಗಿದೆ' ಎಂದು ಒಕ್ಕೂಟ ಉಪಾಧ್ಯಕ್ಷ ಉದಯ ಕೋಟ್ಯಾನ್ ಹೇಳಿದರು.

ಇಲ್ಲಿನ ಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ  ಗುರುವಾರ ನಡೆದ ವಿಶೇಷ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರತಿದಿನ 4 ಲಕ್ಷ ಲೀಟರ್‌ ಹಾಲು  ಸಂಗ್ರಹವಾಗುತ್ತಿದೆ. ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸಾಧನೆ ಮೆರೆದಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದೆ. ಒಕ್ಕೂಟ ಹಾಗೂ ಸಂಘಗಳು ಹೆಸರುವಾಸಿಯಾಗಲು ಕಾರ್ಯನಿರ್ವಹಣಾಧಿಕಾರಿಗಳ ಉತ್ತಮ ಕಾರ್ಯವೈಖರಿಯೇ ಕಾರಣ ಎಂದು ಶ್ಲಾಘಿಸಿದರು.

ADVERTISEMENT

ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಒಕ್ಕೂಟ ನಿರ್ದೇಶಕ ಪ್ರಭಾಕರ ಆರಂಬೋಡಿ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ., ಯೂನಿಯನ್ ನಿರ್ದೇಶಕರಾದ ಸತೀಶ್ ಕೆ., ಪ್ರವೀಣ್ ಗಿಲ್ಬರ್ಟ್ ಪಿಂಟೋ, ಸದಸ್ಯೆ ಸವಿತಾ ಶೆಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎನ್.ರಘು. ಬೆಳ್ತಂಗಡಿ ಎಸ್‌ಸಿಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸುಧೀರ್ ಹಾಜರಿದ್ದರು.

ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ಹಾಗೂ ದಕ್ಷಿಣ ಕನ್ನಡ ಸಹಕಾರ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.