ಪುತ್ತೂರು: ಇಲ್ಲಿನ ನಗರಸಭೆಯ ಆಡಳಿತರೂಢ ಬಿಜೆಪಿಯು ಜಾರಿಗೆ ತಂದಿರುವ ಹೊಸ ಶುಲ್ಕ ನೀತಿಯ ವಿರುದ್ಧ ಹೋರಾಟ ನಡೆಸುವ ಕುರಿತು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬುಧವಾರ ನಡೆದ ನಗರಸಭಾ ಕಾಂಗ್ರೆಸ್ ಸದಸ್ಯರ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು
ಈ ಕುರಿತು ನಗರಸಭೆಯಲ್ಲಿ ನಡೆದ ಸಭೆಯಲ್ಲಿ, ನೂತನ ಶುಲ್ಕ ನೀತಿಯು ಬಡವರ ಹಾಗೂ ಜನ ವಿರೋಧಿಯಾಗಿದೆ ಖಂಡಿಸಲಾಯಿತು.
ನಗರಸಭೆಯ ಹೊಸ ಉದ್ಯಮ ಶುಲ್ಕ ಮತ್ತು ಘನತ್ಯಾಜ್ಯ ಶುಲ್ಕ ನೀತಿ ಪೂರ್ಣವಾಗಿ ಜನವಿರೋಧಿಯಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಶುಲ್ಕಕ್ಕಿಂತ ದುಪ್ಪಟ್ಟು ಶುಲ್ಕವನ್ನು ವಸೂಲಿ ಮಾಡಲು ನಗರಸಭೆ ತೀರ್ಮಾನವನ್ನು ಕೈಗೊಂಡಿದ್ದು, ಇದರಿಂದಾಗಿ ಸಣ್ಣ ಮತ್ತು ಬಡ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗಲಿದೆ. ಘನ ತ್ಯಾಜ್ಯ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದೆ. ನಗರಸಭೆಯ ಆಡಳಿತ ಜನರ ಕಷ್ಟಗಳಿಗೆ ನೆರವಾಗುವ ಬದಲು ಬಡವರನ್ನು ಇನ್ನಷ್ಟು ಕೂಪಕ್ಕೆ ತಳ್ಳುವ ಹೊಸ ಶುಲ್ಕ ನೀತಿಯನ್ನು ಜಾರಿ ಮಾಡಿದೆ. ಬಿಜೆಪಿ ಎಂದೆಂದೂ ಜನರ ಪರವಾಗಿಲ್ಲ. ಅದು ಉಳ್ಳವರ ಪರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದರ ವಿರುದ್ಧ ಹೋರಾಟ ಮಾಡಬೇಕು, ಜನವಿರೋಧಿ ನೀತಿಯನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು ಎಂಬ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ‘ನಗರಸಭೆಯಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ. ಶುಲ್ಕವನ್ನು ಏರಿಕೆ ಮಾಡಿದ್ದೂ ಬಿಜೆಪಿ ಆಡಳಿತ. ಈಗ ರಾಜ್ಯ ಸರ್ಕಾರದ ಆದೇಶದಂತೆ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ವ್ಯಾಪಾರಸ್ಥರಿಗೆ ಮತ್ತು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಈ ರೀತಿಯ ಯಾವುದೇ ಆದೇಶ ಬಂದಿಲ್ಲ. ಜನವಿರೋಧಿ ಆದೇಶವನ್ನು ಕಾಂಗ್ರೆಸ್ ಸರ್ಕಾರ ಎಂದೂ ಜಾರಿ ಮಾಡುವುದಿಲ್ಲ. ಜನರ ಮೇಲೆ ಭಾರ ಹಾಕಿ ಅದನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದು ಹೇಸಿಗೆ ರಾಜಕೀಯ ಎಂದು ಆರೋಪಿಸಿದರು.
ನಗರಸಭೆಯ ಸದಸ್ಯರಾದ ರಿಯಾಝ್ ಪರ್ಲಡ್ಕ, ಶೈಲಾ ಪೈ, ನಾಮನಿರ್ದೇಶಿತ ಸದಸ್ಯರಾದ ಬಶೀರ್ ಪರ್ಲಡ್ಕ, ಶರೀಫ್ ಬಲ್ನಾಡು, ಶಾರದಾ ಅರಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಹಾಜರಿದ್ದರು.
‘ಹೊಸ ಶುಲ್ಕ ನೀತಿ ವಿರುದ್ಧ ಹೋರಾಟ’:
ಎಲ್ಲೂ ಜಾರಿಯಲ್ಲಿಲ್ಲದ ಹೊಸ ಶುಲ್ಕ ನೀತಿಯನ್ನು ಪುತ್ತೂರು ನಗರಸಭೆಯ ಬಿಜೆಪಿ ಆಡಳಿತ ಜಾರಿಗೆ ತಂದಿದೆ. ದೊಡ್ಡ ಉದ್ಯಮಿಗಳಿಂದ ಶುಲ್ಕ ವಸೂಲಿಗೆ ನಮ್ಮ ವಿರೋಧವಿಲ್ಲ. ಆದರೆ ಸಣ್ಣ ವ್ಯಾಪಾರಿಗಳನ್ನು ಹೊಸ ಶುಲ್ಕ ನೀತಿಗೆ ಅಳವಡಿಸಿದ್ದು ಖಂಡನೀಯ. ದಿನಕ್ಕೆ ₹3 ಸಾವಿರ ವ್ಯವಹಾರ ಮಾಡುವ ಬಡ ವ್ಯಾಪಾರಿಗಳ ಮೇಲೆ ಉದ್ಯಮ ಶುಲ್ಕ ಘನತ್ಯಾಜ್ಯ ಶುಲ್ಕವನ್ನು ದುಪ್ಪಟ್ಟು ಮಾಡುವ ಮೂಲಕ ಬಿಜೆಪಿ ಬಡವರ ವಿರೋಧಿ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ಇದರ ವಿರುದ್ದ ಹೋರಾಟ ನಡೆಸಲಾಗುವುದು. ಬಡವರಿಗೆ ಅನ್ಯಾಯವಾದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.