ಮೂಲ್ಕಿ: ನಂದಿನಿ ನದಿ ಮಾಲಿನ್ಯಕ್ಕೆ ಕಾರಣರಾದವರಿಗೆ ತಕ್ಕ ಶಿಕ್ಷೆ ನೀಡುವುದಾಗಿ ಇಲ್ಲಿನ ಚೇಳ್ಯಾರು ಖಂಡಿಗೆ ಧರ್ಮರಸು ಉಳ್ಳಾಯ, ಪರಿವಾರ ದೈವಗಳ ನೇಮೋತ್ಸವ ಸಂದರ್ಭ ಗ್ರಾಮಸ್ಥರಿಗೆ ದೈವ ಅಭಯ ನೀಡಿದೆ.
ಖಂಡಿಗೆ ಚೇಳ್ಯಾರು ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆ ಸಂದರ್ಭ ಸಂಪ್ರದಾಯದಂತೆ ಮೀನು ಹಿಡಿಯುವ ಕಾರ್ಯಕ್ರಮ ನಡೆಯುತ್ತದೆ. ಪ್ರಸ್ತುತ ನಂದಿನಿ ನದಿಯಲ್ಲಿ ತ್ಯಾಜ್ಯ ನೀರು ಹರಿಯುವುದರ ಜೊತೆಗೆ ಕಳೆ ತುಂಬಿದ್ದರಿಂದ ಮೀನು ಹಿಡಿಯಲು ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ನದಿಯಲ್ಲಿ ಮೀನಿನ ಸಂತತಿ ಕಡಿಮೆ ಆಗಿದ್ದು, ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಂಪ್ರದಾಯ ಮಾಯವಾಗುವ ಆತಂಕ ಸ್ಥಳೀಯರಲ್ಲಿ ಇತ್ತು.
ನಂದಿನಿ ನದಿ ಮಾಲಿನ್ಯದಿಂದ ಈ ಬಾರಿ ದೈವಗಳ ನೇಮೋತ್ಸವ ಸಂದರ್ಭ ಮೀನು ಹಿಡಿಯುವ ಜಾತ್ರೆ ನಿಂತು ಹೋಗುವ ಪರಿಸ್ಥಿತಿ ಬಂದಿದ್ದ ಬಗ್ಗೆ ಆಡಳಿತ ಸಮಿತಿ, ನಂದಿನಿ ನದಿ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ದೈವದಲ್ಲೇ ನಿವೇದಿಸಿದರು. ಈ ಬಗ್ಗೆ ಅಭಯ ನೀಡಿದ ಉಳ್ಳಾಯ ದೈವ, ತನ್ನ ಸವಾರಿಯ ನಂದಿನಿ ನದಿ ಉಳಿಸಿಯೇ ಸಿದ್ಧ. ನದಿ ಮಾಲಿನ್ಯಕ್ಕೆ ಕಾರಣರಾದವರಿಗೆ ಶಿಕ್ಷೆ ಕೊಡುತ್ತೇನೆ ಎಂದು ಅಭಯ ನೀಡಿದೆ.
ಕಳೆದ ವರ್ಷವೂ ಈ ಬಗ್ಗೆ ಸ್ಥಳೀಯರು ದೈವಕ್ಕೆ ಮೊರೆ ಹೋಗಿದ್ದು, ಬಳಿಕ ಗ್ರಾಮಸ್ಥರು ಸಂಘಟಿತರಾಗಿ ನಂದಿನಿ ನದಿ ಸಂರಕ್ಷಣ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಲೋಕಾಯುಕ್ತರು ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಇಲಾಖೆಗಳಿಗೆ ಆದೇಶ ನೀಡಿದ್ದರು. ನಂತರ ನದಿ ಸ್ವಚ್ಛತಾಕಾರ್ಯ ಆರಂಭಗೊಂಡಿತ್ತು.
ದೈವಸ್ಥಾನದಲ್ಲಿ ನಂದಿಗೋಣ, ಕುಮಾರ ಸಿರಿಗಳ ಭೇಟಿ, ನಾಗದೇವರಿಗೆ ಭಕ್ತಾದಿಗಳಿಂದ ತಂಬಿಲ, ಬಾಕಿಮಾರು ಗದ್ದೆಯಲ್ಲಿ ಚೆಂಡು, ಜಾರಂದಾಯ ಬಂಟ, ಕೊಡಮಣಿತ್ತಾಯ ದೈವಗಳಿಗೆ ಜೋಡಿ ನೇಮೋತ್ಸವ, ಬಾಕಿಲ್ ದಾಂತಿ ಕೊಡ್ದಬ್ಬು ದೈವಸ್ಥಾನದ ಕೋಡ್ದಬ್ಬು ಮತ್ತು ಧೂಮಾವತಿ ದೈವದ ಭೇಟಿ, ಉಳ್ಳಾಯ ಹಾಗೂ ಪರಿವಾರ ದೈವಗಳಿಗೆ ಸಾಮೂಹಿಕ ಹೂವಿನ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ, ಧ್ವಜಾರೋಹಣ, ಖಂಡಿಗೆ ಬೀಡಿಗೆ ಭಂಡಾರ ನಿರ್ಗಮನ ನಡೆಯುವ ಸಂಪ್ರದಾಯ ನಡೆಯಿತು.
ದೈವಸ್ಥಾನಕ್ಕೆ ಸಂಬಂಧಿಸಿದ ಶ್ರೀಪತಿ ಭಟ್ ಭಟ್ರಚಾವಡಿ, ಹಳೆಯಂಗಡಿ ರಂಗನಾಥ ಭಟ್, ಆಡಳಿತ ಸಮಿತಿ ಗೌರವಾಧ್ಯಕ್ಷ ತೋಕೂರು ಗುತ್ತು ಉದಯ ಕುಮಾರ್ ಶೆಟ್ಟಿ, ಅಧ್ಯಕ್ಷ ಖಂಡಿಗೆಬೀಡು ಡಯಾನಂದ ಬಿ. ಶೆಟ್ಟಿ, ಕಾರ್ಯದರ್ಶಿ ಚರಣ್‌ಕುಮಾರ್ ಶೆಟ್ಟಿ, ಕೋಶಾಧಿಕಾರಿ ಸುಧಾಕರ ಪಿ. ಶೆಟ್ಟಿ, ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.