ADVERTISEMENT

ದತ್ತ ಜಯಂತಿಗೆ ನಾಟಕೋತ್ಸವ ಮೆರುಗು

ಮಹಾಯಾಗ ಸಪ್ತಾಹದಲ್ಲಿ ಆರು ದಿನಗಳ ಸ್ಪರ್ಧೆ; ನಿತ್ಯ ಹರಿಕಥೆ ಸೇರಿ 7 ದಿನ ವೈವಿಧ್ಯಮಯ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 12:21 IST
Last Updated 23 ನವೆಂಬರ್ 2022, 12:21 IST
ಪತ್ರಿಕಾಗೋಷ್ಠಿಯಲ್ಲಿ ಯಶವಂತ ವಿಟ್ಲ ಮಾತನಾಡಿದರು. ತಾರಾನಾಥ ಶೆಟ್ಟಿ, ಲೋಕನಾಥ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಹಾಗೂ ಎ.ಸುರೇಶ ರೈ ಇದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಯಶವಂತ ವಿಟ್ಲ ಮಾತನಾಡಿದರು. ತಾರಾನಾಥ ಶೆಟ್ಟಿ, ಲೋಕನಾಥ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಹಾಗೂ ಎ.ಸುರೇಶ ರೈ ಇದ್ದಾರೆ   

ಮಂಗಳೂರು: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನಲ್ಲಿ ದತ್ತ ಜಯಂತಿ ಮಹೋತ್ಸವ, ಶ್ರೀ ದತ್ತ ಮಹಾಯಾಗ ಸಪ್ತಾಹ ಹಾಗೂ ಹರಿಕಥಾ ಸತ್ಸಂಗ ಸಪ್ತಾಹದ ಅಂಗವಾಗಿ ತುಳು ನಾಟಕ ಸ್ಪರ್ಧೆ ಡಿಸೆಂಬರ್‌ 1ರಿಂದ 7ರವರೆಗೆ ನಡೆಯಲಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ನಾಟಕ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು, ನಿತ್ಯವೂ ಮೂರು ನಾಟಕಗಳು ಇರುತ್ತವೆ ಎಂದು ಒಡಿಯೂರ್ದ ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದತ್ತ ಜಯಂತಿ ಮಹೋತ್ಸವವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಡಿಸೆಂಬರ್ 1ರಂದು ಬೆಳಿಗ್ಗೆ 9 ಗಂಟೆಯಿಂದ ಗಣಪತಿ ಹವನ, ನಾಗತಂಬಿಲ, ಶ್ರೀ ದತ್ತಮಹಾಯಾಗ ಸಪ್ತಾಹ ಆರಂಭ, 9.30ರಿಂದ ದತ್ತ ಮಾಲಾಧಾರಣೆ, 10.30ಕ್ಕೆ ಹರಿಕಥಾ ಸಪ್ತಾಹ ಉದ್ಘಾಟನೆ, 12 ಗಂಟೆಗೆ ಮಹಾಪೂಜೆ ಮತ್ತು ಮಹಾಸಂತರ್ಪಣೆ ನಡೆಯಲಿದೆ’ ಎಂದು ಅವರು ವಿವರಿಸಿದರು.

ADVERTISEMENT

ಅಂದು ಮಧ್ಯಾಹ್ನ 2 ಗಂಟೆಗೆ ಒಡಿಯೂರು ತುಳು ನಾಟಕ ಸ್ಪರ್ಧೆ ಉದ್ಘಾಟನೆಗೊಳ್ಳಲಿದ್ದು ಸಂಜೆ 6ರಿಂದ ದತ್ತಾಂಜನೇಯ ದೇವರ ಪಲ್ಲಕ್ಕಿ ಉತ್ಸವ, ರಂಗಪೂಜೆ ಮತ್ತು ವಿಶೇಷ ಬೆಳ್ಳಿ ರಥೋತ್ಸವ ನಡೆಯಲಿದೆ. 7ನೇ ತಾರೀಕು ವರೆಗೆ ನಿತ್ಯವೂ ವೇದ– ಗುರುಚರಿತ್ರೆ ಪಾರಾಯಣ ಹರಿಕಥೆ, ರಂಗಪೂಜೆ ಮತ್ತು ಬೆಳ್ಳಿರಥೋತ್ಸವ ನಡೆಯಲಿದೆ’ ಎಂದು ಅವರು ತಿಳಿಸಿದರು.

ನಾಟಕ ಸ್ಪರ್ಧೆಯ ಸಂಚಾಲಕ ಕದ್ರಿ ನವನೀತ ಶೆಟ್ಟಿ ‘6ನೇ ತಾರೀಕು ವರೆಗೆ ಮಧ್ಯಾಹ್ನ 2, ಸಂಜೆ 5 ಮತ್ತು ರಾತ್ರಿ 8 ಗಂಟೆಗೆ ಸ್ಪರ್ಧೆಗಳ ನಾಟಕಗಳು ಪ್ರದರ್ಶನಗೊಳ್ಳಲಿವೆ. ಮೊದಲ ಬಹುಮಾನವಾಗಿ ₹30 ಸಾವಿರ, ದ್ವಿತೀಯ ₹20 ಸಾವಿರ ಮತ್ತು ತೃತೀಯ ₹10 ಸಾವಿರ ನೀಡಲಾಗುವುದು. ಮೂರೂ ಬಹುಮಾನಗಳ ಜೊತೆ ಶಾಶ್ವತ ಫಲಕವೂ ಇರುತ್ತದೆ. ಉತ್ತಮ ನಟ, ನಟಿ, ಪೋಷಕ ಪಾತ್ರ, ಸಂಗೀತ ನಿರ್ದೇಶಕ, ರಂಗನಿರ್ಮಾಣ, ನಿರ್ದೇಶಕ, ಉತ್ತಮ ಕೃತಿ, ವೇಷಭೂಷಣ ಮುಂತಾದ ಬಹುಮಾನಗಳನ್ನೂ ನೀಡಲಾಗುವುದು’ ಎಂದು ತಿಳಿಸಿದರು.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಸುರೇಶ್ ರೈ, ನಿರ್ದೇಶಕ ಲೋಕನಾಥ ಜಿ.ಶೆಟ್ಟಿ, ಯುವ ಬಳಗದ ಅಧ್ಯಕ್ಷ ತಾರಾನಾಥ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.