ADVERTISEMENT

ಪುತ್ತೂರಿನಲ್ಲಿ ‘ಟಿಪ್ಪು ನಿಜ ಕನಸುಗಳು’ ನಾಟಕ ನಾಳೆ

ಪುತ್ತೂರಿನಲ್ಲಿ ಟಿಪ್ಪುವಿನ ಇನ್ನೊಂದು ಮುಖದ ಪರಿಚಯ: ಅಡ್ಡಂಡ ಕಾರ್ಯಪ್ಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 6:58 IST
Last Updated 8 ಜನವರಿ 2023, 6:58 IST
ಅಡ್ಡಂಡ ಸಿ. ಕಾರ್ಯಪ್ಪ
ಅಡ್ಡಂಡ ಸಿ. ಕಾರ್ಯಪ್ಪ   

ಪುತ್ತೂರು: ‘ಟಿಪ್ಪು ನಿಜ ಕನಸುಗಳು’ ನಾಟಕ ಈಗಾಗಲೇ 20 ಕಡೆಗಳಲ್ಲಿ ಪ್ರದರ್ಶನ ಕಂಡಿದೆ. 21ನೇ ನಾಟಕ ಪ್ರದರ್ಶನ ಜ.9ರಂದು ಸಂಜೆ 6 ಗಂಟೆಗೆ ಪುತ್ತೂರಿನ ವಿವೇಕಾನಂದ ಕಾಲೇಜು ವಠಾರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಾಟಕದ ರಚನೆಕಾರ, ಮೈಸೂರು ರಂಗಾಯಣ ಸಂಸ್ಥೆಯ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.

‌ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಟಿಪ್ಪು ಸುಲ್ತಾನ್ ಚರಿತ್ರೆ ಕುರಿತು ಸತ್ಯದ ಅನಾವರಣ ಹಾಗೂ ಟಿಪ್ಪುವಿನ ಇನ್ನೊಂದು ಮುಖವನ್ನು ಪರಿಚಯಿ ಸುವುದೇ ‘ಟಿಪ್ಪು ನಿಜಕನಸುಗಳು’ ನಾಟಕದ ಉದ್ದೇಶ. ಇದು ಸತ್ಯ ಇತಿಹಾಸ. ಅದಕ್ಕೆ ನಾನು ಸಾಕ್ಷಿಗಳನ್ನು ಕೊಡಬಲ್ಲೆ’ ಎಂದು ಹೇಳಿದರು.

‘ಮೂರೂವರೆ ಗಂಟೆಗಳ ಕಾಲ ನಾಟಕ ನಡೆಯಲಿದೆ. ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ನಾಟಕ ಇದಾಗಿದೆ. ಕೆಲವರಿಂದ ಪ್ರತಿರೋಧವೂ ಬಂದಿದೆ. ನ್ಯಾಯಾಲಯಕ್ಕೂ ಹೋಗಿದ್ದಾರೆ. ಯಾರು ಏನು ಬೇಕಾದರೂ ಹೇಳಿಕೊಳ್ಳಲಿ, ಆದರೆ ನಾನು ಹೇಳಿದ್ದು ಎಲ್ಲವೂ ಸತ್ಯ’ ಎಂದು ತಿಳಿಸಿದರು.

ADVERTISEMENT

ಚರಿತ್ರೆ ಪುರುಷರು ಟಿಪ್ಪುವನ್ನು ವೈಭವೀಕರಿಸಿದ್ದಾರೆ. ಪಠ್ಯದಲ್ಲಿ ಬಂದ ಕಾರಣ ಅದನ್ನು ಓದಲೇ ಬೇಕಾಗಿ ಬಂದಿದೆ. ಚರಿತ್ರೆ ತಿರುಚಿತ ಸಂಗತಿಯನ್ನೇ ನಾವು ಪಠ್ಯದಲ್ಲಿ ಬಂದ ಕಾರಣ ಸತ್ಯ ಎಂದು ತಿಳಿದುಕೊಂಡಿದ್ದೇವೆ. ಆದರೆ, ಟಿಪ್ಪು ವಿಚಾರದಲ್ಲಿ ಸತ್ಯದ ಅನಾವರಣ ಮಾಡುವ ಉದ್ದೇಶವೇ ಈ ನಾಟಕದ್ದಾಗಿದೆ ಎಂದರು.

ಟಿಪ್ಪು ಪರವಾಗಿರುವ ಮತ್ತು ವಿರೋಧವಾಗಿರುವ ಪುಸ್ತಕಗಳನ್ನು ಅಧ್ಯಯನ ಮಾಡಿ, ಕಲ್ಲಿಕೋಟೆಯ ಸೇನಾನಿಗೆ ಟಿಪ್ಪು ಬರೆದ ಪತ್ರಗಳನ್ನು ಆಧರಿಸಿ ನಾನು ಈ ನಾಟಕ ರಚಿಸಿದ್ದೇನೆ. ಇದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ ಎಂದ ಅವರು, 32 ವರ್ಷಗಳಿಂದ ಯಶಸ್ವಿ ನಾಟಕಗಳ ರಂಗ ಪ್ರಯೋಗ ಮಾಡುತ್ತಾ ಬಂದಿರುವ ರಂಗಾಯಣದ 40 ಮಂದಿಯ ತಂಡದಿಂದ ಟಿಪ್ಪು ಚರಿತ್ರೆ ವಿಚಾರವಾಗಿ ಸತ್ಯವನ್ನು ಸಾರುವ ಈ ನಾಟಕ ಪ್ರದರ್ಶನಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.

ಸುಳ್ಯ ಕೆವಿಜಿ ವಿದ್ಯಾಲಯದ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ಕಲಾವಿದೆ ವಸಂತಲಕ್ಷ್ಮಿ ಮತ್ತು ಡಾ.‌ಕೃಷ್ಣಪ್ರಸನ್ನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.