ADVERTISEMENT

ಜಯಂತಿ ಬಂಗೇರಗೆ ‘ತೌಳವ ಸಿರಿ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:43 IST
Last Updated 12 ಏಪ್ರಿಲ್ 2025, 15:43 IST
ಜಯಂತಿ ಎಸ್. ಬಂಗೇರ ಅವರಿಗೆ ತೌಳವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು
ಜಯಂತಿ ಎಸ್. ಬಂಗೇರ ಅವರಿಗೆ ತೌಳವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮಂಗಳೂರು: ಸಾಹಿತಿ ಸುನೀತಾ ಎಂ. ಶೆಟ್ಟಿ ದತ್ತಿನಿಧಿ ಪ್ರಾಯೋಜಿತ ತೌಳವ ಸಿರಿ ಪ್ರಶಸ್ತಿಯನ್ನು ಲೇಖಕಿ ಜಯಂತಿ ಎಸ್. ಬಂಗೇರ ಅವರಿಗೆ ಶನಿವಾರ ಇಲ್ಲಿ ಪ್ರದಾನ ಮಾಡಲಾಯಿತು.

ಕರಾವಳಿ ಲೇಖಕಿಯರ– ವಾಚಕಿಯರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಹಿಂದೆ ಮಹಿಳಾ ಬರವಣಿಗೆಗೆ ಅಷ್ಟೊಂದು ಪ್ರೋತ್ಸಾಹ ಇರಲಿಲ್ಲ. ಆ ಕಾಲದ ಅನೇಕ ಸವಾಲುಗಳನ್ನು ಮೆಟ್ಟಿನಿಂತು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಮಹಿಳೆಯರು ಕೊಡುಗೆ ನೀಡಿದ್ದಾರೆ. ಅಂತಹ ವಾತಾವರಣದಲ್ಲಿ ಸಾಹಿತ್ಯ, ನಾಟಕಗಳ ಬರವಣಿಗೆ ಜೊತೆಗೆ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡು ಯಶಸ್ಸು ಕಂಡವರು ಜಯಂತಿ ಬಂಗೇರ ಎಂದರು.

ಪತ್ರಿಕೆ ಕಟ್ಟುವುದು ಸುಲಭದ ಮಾತಲ್ಲ. ಅದರಲ್ಲೂ ತುಳು ಪತ್ರಿಕೆಗೆ ಸೀಮಿತ ಓದುಗರು ಇರುತ್ತಾರೆ. ಈ ನಡುವೆ ಪತ್ರಿಕೆ ಪ್ರಸರಣ, ಜಾಹೀರಾತು ಸಂಗ್ರಹ, ರಾಜ್ಯ ಮಟ್ಟದ ಪತ್ರಿಕೆಗಳ ಸ್ಪರ್ಧೆ ಇಂತಹ ಸವಾಲುಗಳನ್ನು ಮೀರಿ ಪತ್ರಿಕೆ ನಡೆಸುತ್ತಿರುವುದು ದೊಡ್ಡ ಸಾಧನೆ ಎಂದು ಹೇಳಿದರು.

ADVERTISEMENT

ಪ್ರಶಸ್ತಿ ಸ್ವೀಕರಿಸಿದ ಜಯಂತಿ ಎಸ್. ಬಂಗೇರ ಮಾತನಾಡಿ, ‘ಬರವಣಿಗೆಯ ಆರಂಭದಲ್ಲಿ ಅನೇಕರು ನನ್ನದೇ ಬರವಣಿಗೆ ಹೌದಾ ಎಂದು ಸಂಶಯಿಸಿದ್ದರು. ಅಂತಹ ಟೀಕೆಗಳನ್ನು ಮೀರಿ, ಸ್ವ ಪ್ರಯತ್ನದಿಂದ ಈ ಹಂತಕ್ಕೆ ತಲುಪಿದ ಸಮಾಧಾನವಿದೆ. ನಂತರದಲ್ಲಿ ನಾಟಕ ಬರವಣಿಗೆ, ನಟನೆ ಜೊತೆಗೆ ‘ಉಡಲ್’ ಪತ್ರಿಕೆ ಮುನ್ನಡೆಸುವ ಕಾರ್ಯ ಎಲ್ಲವನ್ನೂ ಹಿತೈಷಿಗಳು ಪ್ರೋತ್ಸಾಹಿಸಿದರು. ಪ್ರಶಸ್ತಿಗಳು ಬರವಣಿಗೆಗೆ ಉತ್ತೇಜನ ನೀಡಿದವು’ ಎಂದರು.

ಸಾಹಿತಿ ಮೀನಾಕ್ಷಿ ರಾಮಚಂದ್ರ ಮಾತನಾಡಿ, ಸ್ತ್ರೀ ಮನಸ್ಸು ಮಾಡಿದರೆ, ಎಲ್ಲ ಅಡೆತಡೆಗಳನ್ನು ಮೀರಿ ಎತ್ತರಕ್ಕೆ ಏರಬಲ್ಲಳು. ದೃಢತೆಯೇ ಆಕೆಯ ಯಶಸ್ಸಿನ ಮೆಟ್ಟಿಲು’ ಎಂದರು. ಕರಾವಳಿ ಲೇಖಕಿಯರ– ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಕ್ಷಯ ಆರ್ ಶೆಟ್ಟಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.