ಮಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಕುಟುಂಬಗಳು ಮೂಲಸೌಕರ್ಯ ವಂಚಿತವಾಗಿವೆ. ಈ ಕುಟುಂಬಗಳು ವಾಸವಾಗಿರುವ ಕಡೆಗೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕವೂ ಇಲ್ಲ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ ಲಾಯಿಲ ಆರೋಪಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಆಲಿಸುವ ಸಲುವಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಜಂಟಿಯಾಗಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಒಂಬತ್ತು ಗ್ರಾಮಗಳಲ್ಲಿ ವಾಸವಾಗಿರುವ ಮಲೆಕುಡಿಯರ 210 ಕುಟುಂಬಗಳು ಎದುರಿಸುತ್ತಿರುವ ಕಷ್ಟಗಳನ್ನು ಅವರು ಬಿಚ್ಚಿಟ್ಟರು.
ಬೆಳ್ತಂಗಡಿ ತಾಲ್ಲೂಕಿನ ಸುಲ್ಕೇರಿಯ ಅಟ್ರಿಂಜೆಯ ಆರೇಳು ಕೊರಗ ಕುಟುಂಬಗಳು ಮಳೆಗಾಲದಲ್ಲಿ ಹೊಳೆ ದಾಟಲು ಶಿಥಿಲಗೊಂಡ ಮರದ ಕಾಲುಸಂಕವನ್ನೇ ನೆಚ್ಚಿಕೊಂಡಿವೆ. ಅವರ ಹೆಸರಿನಲ್ಲಿ ಮಂಜೂರಾದ ಸೇತುವೆಯನ್ನು ಅವರ ವಸತಿಯಿಂದ 1 ಕಿ.ಮೀ ದೂರದಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಆ ಕುಟುಂಬಗಳಿಗೆ ಯಾವ ಪ್ರಯೋಜನವೂ ಇಲ್ಲ. ಮಕ್ಕಳು ಶಾಲೆಗೆ ಹೋಗುವಾಗ ಮರದ ಸಂಕ ದಾಟುವ ಸಂಕಷ್ಟ ತಪ್ಪದು ಎಂದು ಅವರು ಗಮನ ಸೆಳೆದರು.
ಸವಣಾಳು ಗ್ರಾಮದಲ್ಲಿ ಹೊಳೆಯೊಂದಕ್ಕೆ ಸೇತುವೆ ಇಲ್ಲ. ಇಬ್ಬರು ದ್ವಿಚಕ್ರವಾಹನದಲ್ಲಿ ಈ ಹೊಳೆ ದಾಟುವಾಗ ದಿಢೀರ್ ಕಾಣಿಸಿಕೊಂಡ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಅವರು ಹಗ್ಗವನ್ನು ಹಿಡಿದುಕೊಂಡು ಬಚಾವಾಗಿದ್ದರು’ ಎಂದು ಅವರು ವಿವರಿಸಿದರು.
ಬೆಳ್ತಂಗಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 18 ಡಿ ಗುಂಪಿನ ನೌಕರರಿಗೆ ಮೂರು ನಾಲ್ಕು ತಿಂಗಳುಗಳಿಗೊಮ್ಮೆ ಸಂಬಳ ಪಾವತಿಯಾಗುತ್ತಿದೆ. ಅವರಿಗೆ ತಿಂಗಳಿಗೊಂದು ರಜೆ ಸೌಲಭ್ಯವೂ ಇಲ್ಲ ಎಂದು ಶೇಖರ್ ಗಮನ ಸೆಳೆದರು. ಈ ಸಮಸ್ಯೆಗಳ ಇತ್ಯರ್ಥಕ್ಕೆ ಸಂಬಂಧಪಟ್ಟವರ ಗಮನ ಸೆಳೆಯುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಭರವಸೆ ನೀಡಿದರು.
ಪುತ್ತೂರು ತಾಲ್ಲೂಕಿನ ಬಳ್ನಾಡುವಿನ ನಿರ್ಡೆ ಮತ್ತು ಅಜಕ್ಕಳ ಗ್ರಾಮಗಳ ಪರಿಶಿಷ್ಟ ಜಾತಿಯ 13 ಕುಟುಂಬಗಳಿಗೆ ರಸ್ತೆ ಸಂಪರ್ಕ ಇಲ್ಲ. ಗರ್ಭಿಣಿಯರು, ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನ ಸೆಳೆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಸ್ಥಳೀಯ ಮುಖಂಡರೊಬ್ಬರು ದೂರಿದರು.
ವಾಮದಪದವು ಗ್ರಾಮದ ಸರ್ಕಾರಿ ಶಾಲೆಯ ವಠಾರವನ್ನು ಕೆಲವರು ಗುಟ್ಕಾ, ಮದ್ಯಸೇವನೆಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗುಟ್ಕಾ ಪೊಟ್ಟಣಗಳನ್ನು ಹಾಗೂ ಮದ್ಯದ ಬಾಟಲಿಗಳನ್ನು ಅಲ್ಲೇ ಬಿಸಾಡುತ್ತಿದ್ದಾರೆ ಎಂದು ಸ್ಥಳಿಯರೊಬ್ಬರು ಆರೋಪಿಸಿದರು. ‘ಈ ಪ್ರದೇಶದಲ್ಲಿ ರಾತ್ರಿ ವೇಳೆ ಗಸ್ತು ತಿರುಗುವಂತೆ ಸಂಬಂಧ ಪಟ್ಟ ಠಾಣೆಯಪೊಲೀಸರಿಗೆ ಸೂಚನೆ ನೀಡುತ್ತೇನೆ’ ಎಂದು ಎಸ್‌ಪಿ ಭರವಸೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಸವಲತ್ತುಗಳ ಬಗ್ಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಮಹಿಳೆಯೊಬ್ಬರು ದೂರಿದರು.
ಇಲಾಖೆಯ ಸವಲತ್ತುಗಳಿಗೆ ಸಂಬಂಧಿಸಿದ ಕರಪತ್ರಗಳನ್ನು ಮುಂದಿನ ಸಭೆಗೆ ಬರುವಾಗ ತರುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೂಚಿಸಿದರು.
ದೌರ್ಜನ್ಯ, ಕಿರುಕುಳಕ್ಕೆ ಸಂಬಂಧಿಸಿ ಸಮೀಪದ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬೇಕು. ಅಲ್ಲಿ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಅವುಗಳನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಠಾಣೆಗೆ ವರ್ಗಾಯಿಸಲಾಗುತ್ತದೆ. ಸಂತ್ರಸ್ತರು ನೇರವಾಗಿಯೂ ಡಿಸಿಆರ್‌ಇ ಠಾಣೆಗೂ ಈ ಸಂಬಂಧ ದೂರು ನೀಡಬಹುದು ಎಂದು ಕಮಿಷನರ್ ತಿಳಿಸಿದರು.
ತೊಕ್ಕೊಟ್ಟು ಮೇಲ್ಸೇತುವೆ ಕೆಳಗಿನ ಅಕ್ರಮ ಮಾರುಕಟ್ಟೆಯಿಂದ ಸಂಚಾರ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಗಿರೀಶ್ ಕುಮಾರ್ ಒತ್ತಾಯಿಸಿದರು.
ಪಾಂಡೇಶ್ವರದಲ್ಲಿ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುವುದು ಹೆಚ್ಚುತ್ತಿದೆ ಎಂದು ಜಗದೀಶ ಪಾಂಡೇಶ್ವರ ಆರೋಪಿಸಿದರು. ಮಂಗಳೂರು ದಕ್ಷಿಣ ಠಾಣೆಯ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಚಲಾಯಿಸಿದ್ದಕ್ಕೆ ಸಂಬಂಧಿಸಿ ತಿಂಗಳಿನಿಂದ ಈಚೆಗೆ 78 ಪ್ರಕರಣ ದಾಖಲಿಸಿಕೊಂಡು, ₹ 38,600 ದಂಡ ವಸೂಲಿ ಮಾಡಲಾಗಿದೆ ಎಂದು ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ ತಿಳಿಸಿದರು.
ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಭಾಗವಹಿಸಿದ್ದರು.
ನಿರಾಶ್ರಿತರ ಕೇಂದ್ರದಲ್ಲಿ ಕಿರುಕುಳ: ಆರೋಪ
ಪಚ್ಚನಾಡಿಯಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದವರ ಮೇಲೆ ದಬ್ಬಾಳಿಕೆ ನಡೆಸಲಾಗಿದೆ ಎಂದು ಅಲ್ಲಿನ ಮಾಜಿ ಮೇಲ್ವಿಚಾರಕರ ವಿರುದ್ಧದ ಆರೋಪದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಅಡಿಗ ತಿಳಿಸಿದರು.
ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನಯ ಬಲವಂತದಿಂದ ಕರೆದೊಯ್ದು ಈ ಕೇಂದ್ರದಲ್ಲಿ ಒಂದು ವರ್ಷ ಇರಿಸಿಕೊಳ್ಳಲಾಗಿತ್ತು. ಈ ಕೇಂದ್ರದ ಮೇಲ್ವಿಚಾರಕರಾಗಿ ನಿವೃತ್ತಿಗೊಂಡಿರುವ ವ್ಯಕ್ತಿಯು ಈ ಕೇಂದ್ರದಲ್ಲಿದ್ದ ನಿರಾಶ್ರಿತರಿಂದ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದ. ತಿರುವೈಲ್ನ ಅಂಬೇಡ್ಕರ ಭವನ ಜಾಗ ಒತ್ತುವರಿಯಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಎಸ್.ಪಿ.ಆನಂದ ಆರೋಪಿಸಿದರು.
‘ಸಂತ್ರಸ್ತ ವ್ಯಕ್ತಿ ಈ ಬಗ್ಗೆ ದೂರು ನೀಡಿದರೆ ನೋಡಲ್ ಅಧಿಕಾರಿ ರಾಜ್ಯಮಟ್ಟದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲು ಅನುಕೂಲವಾಗುತ್ತದೆ’ ಎಂದು ಅಪರಾಧ ಪತ್ತೆ ವಿಭಾಗದ ಡಿಸಿಪಿ ರವಿಶಂಕರ್ ತಿಳಿಸಿದರು.
‘ಮರಳು ಅಭಾವ ಮಾಫಿಯಾದ ಸೃಷ್ಟಿ’
‘ಜಿಲ್ಲೆಯಲ್ಲಿ ಮರಳು ಮತ್ತು ಕೆಂಪುಕಲ್ಲಿನ ಮಾಫಿಯಾದವರೇ ಅವುಗಳ ಕೃತಕ ಅಭಾವವನ್ನು ಸೃಷ್ಟಿಸಿದ್ದಾರೆ. ಕರಾವಳಿ ನಿರ್ಬಂಧ ವಲಯದ (ಸಿಆರ್‌ಜೆಡ್) ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶ ಅವರದ್ದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ಈ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘ಜಿಲ್ಲೆಯಲ್ಲಿ ಮರಳಿನ ಅಭಾವ ಇಲ್ಲ. ಮರಳಿನ ಬ್ಲಾಕ್‌ಗಳನ್ನು ಈಗಾಗಲೇ ಗುರುತಿಸಲಾಗಿದೆ ಮರಳಿನ ಅಗತ್ಯ ಇರುವವರು ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಕಾಯ್ದಿರಿಸಬಹುದು. ಕಾನೂನುಬದ್ಧವಾಗಿ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ನಾವು ಯಾವುದೇ ಕ್ರಮ ಕೈಗೊಂಡಿಲ್ಲ. ಅಕ್ರಮ ಚಟುವಟಿಕೆಗೆ ನಾವು ಯಾವತ್ತೂ ಅವಕಾಶ ಕಲ್ಪಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.