ಪುತ್ತೂರು: ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿಸುವ ಬಗ್ಗೆ ಅಧ್ಯಯನ ನಡೆಸಲು ಸರ್ಕಾರವು ಅಧಿಕಾರಿಗಳ ತಂಡವನ್ನು ಆಂಧ್ರಪ್ರದೇಶಕ್ಕೆ ಕಳುಹಿಸಿದೆ. ಇದರಿಂದ ತುಳುವಿಗೆ ಮನ್ನಣೆ ಪಡೆಯುವ ಹೋರಾಟಕ್ಕೆ ಬಲ ಬಂದಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಆಂಧ್ರಪ್ರದೇಶ ಸರ್ಕಾರ ಉರ್ದುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಜಾರಿಗೆ ತಂದಿತ್ತು. ಶಾಸಕ ಅಶೋಕ್ ರೈ ಅವರು ಆಂಧ್ರಪ್ರದೇಶಕ್ಕೆ ತಂಡವನ್ನು ಸ್ವಂತ ಖರ್ಚಿನಿಂದ ಕಳುಹಿಸಿದ್ದರು. ಆ ತಂಡವು ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಕುರಿತ ವಿಸ್ತ್ರೃತ ಅಧ್ಯಯನಕ್ಕೆ ಸರ್ಕಾರ ಕ್ರಮವಹಿಸಿದೆ.
’ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ತಂಡವು ಈಗಾಗಲೇ ಆಂಧ್ರ ಪ್ರದೇಶಕ್ಕೆ ತೆರಳಿದೆ. ತಂಡವು ಎರಡನೇ ಅಧಿಕೃತ ಭಾಷೆಯನ್ನು ಜಾರಿಗೊಳಿಸುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲಿದೆ. ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿಸಲು ಇದು ನೆರವಾಗಲಿದೆ’ ಎಂದು ಶಾಸಕ ರೈ ತಿಳಿಸಿದ್ದಾರೆ.
‘ರಾಜ್ಯದಲ್ಲಿ ತುಳುವಿಗೂ ಮನ್ನಣೆ ಸಿಗಬೇಕೆಂಬ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.