ನೀರಿನ ಸಮಸ್ಯೆ
– ಪ್ರಜಾವಾಣಿ ಚಿತ್ರ
ಉಳ್ಳಾಲ: ಇಲ್ಲಿನ ನಗರ ಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ನಗರ ಸಭೆ ₹ 14 ಲಕ್ಷ ನೀಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತವಾಯಿತು.
ನಗರಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ದಿನಕರ್ ಉಳ್ಳಾಲ, ತಾಲ್ಲೂಕಿನ ಪಜೀರ್ ಗ್ರಾಮದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಾಣ ಆಗಿದೆ. ಅಂದಾಜು ₹ 200 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ನಗರಸಭೆ ₹ 14 ಲಕ್ಷವನ್ನು ಯಾಕೆ ನೀಡಬೇಕು? ಈ ನೀರು ಉಳ್ಳಾಲಕ್ಕೆ ಬರುತ್ತದೆಯೇ ಎಂದು ಪ್ರಶ್ನಿಸಿದರು.
ಪೌರಾಯುಕ್ತ ನವೀನ್ ಹೆಗ್ಡೆ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಾಲ್ಲೂಕಿಗೆ ಸಂಬಂಧಿಸಿದ್ದು, ಈ ನೀರು ಉಳ್ಳಾಲಕ್ಕೂ ಬರುತ್ತದೆ. ಇದರ ವೆಚ್ಚ ತಾಲ್ಲೂಕು ವ್ಯಾಪ್ತಿಯ ಗ್ರಾ.ಪಂ. ಹಾಗೂ ನಗರಸಭೆ ಹಂಚಬೇಕು. ಹಣ ನೀಡುವ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡಬೇಕು ಎಂದರು.
ಸದಸ್ಯ ಅಯ್ಯೂಬ್ ಮಂಚಿಲ ಮಾತನಾಡಿ, ಈ ಯೋಜನೆಯಡಿ ಕುಡಿಯುವ ನೀರು ಸರಬರಾಜು ಆಗುತ್ತದೆ. ಹಣ ನೀಡುವ ವಿಚಾರದಲ್ಲಿ ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದರು.
ಅಮೃತ್ 2.0 ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಅವ್ಯವಸ್ಥೆ ಬಗ್ಗೆ ಸಹಾಯಕ ಎಂಜಿನಿಯರ್ ಶ್ರೀಕಾಂತ್ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಕೌನ್ಸಿಲರ್ ಬಶೀರ್ ಮಾತನಾಡಿ, ಅಮೃತ್ 2.0 ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯಿಂದಾಗಿ ಹೊಸ ಇಂಟರ್ ಲಾಕ್ ಅಗೆದು ಹಾಕಿದ್ದಾರೆ. ಇದನ್ನು ಯಾಕೆ ದುರಸ್ತಿ ಮಾಡಿಲ್ಲ ಎಂದು ಪ್ರಶ್ನಿಸಿದರು.
ಕೌನ್ಸಿಲರ್‌ಗಳಾದ ಗೀತಾ ಬಾಯಿ, ಚಿತ್ರ ಮಾತನಾಡಿ, ಒಳಪೇಟೆಯಲ್ಲಿ ಇಂಟರ್ ಲಾಕ್ ಅಗೆದಿರುವುದರಿಂದ ಆವರಣಗೋಡೆ ಗೋಡೆ ಬಿದ್ದಿದೆ. ಮನೆಗೂ ತೊಂದರೆ ಆಗಿದೆ. ಪೈಪ್ ಲೈನ್ ಜೋಡಣೆ ಸರಿಯಾಗಿಲ್ಲ. ಇದರಿಂದ ನೀರಿನ ಜೊತೆ ಮಣ್ಣು ಬರುತ್ತದೆ ಎಂದರು. ಕೌನ್ಸಿಲರ್ ರೇಶ್ಮಾ ಮಾತನಾಡಿ, ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ನೀಡಿಲ್ಲ. ನೀರಿನ ವಿಚಾರದಲ್ಲಿ ತಾರತಮ್ಯ ಮಾಡುವುದು ಬೇಡ ಎಂದರು.
ಸಹಾಯಕ ಎಂಜಿನಿಯರ್ ಶ್ರೀಕಾಂತ್ ಮಾತನಾಡಿ, ಮಳೆಗಾಲ ಆದ ಕಾರಣ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿದೆ. ಮಳೆಗಾಲ ಮುಗಿದ ಬಳಿಕ ಸಮಸ್ಯೆ ಬಗೆಹಗರಿಸಲಾಗುವುದು ಎಂದು ಭರವಸೆ ನೀಡಿದರು.
ಪೌರಾಯುಕ್ತ ನವೀನ್ ಹೆಗ್ಡೆ ಮಾತನಾಡಿ, ಜಾಗದ ಕನ್ವರ್ಷನ್ ಸರಿಪಡಿಸಿ ದಾಖಲೆ ಸರಿಪಡಿಸಬೇಕು. ಕನ್ವರ್ಷನ್ ಮಾಡದ ಜಾಗವನ್ನು ಬಿ ಖಾತೆಯಲ್ಲಿ ಗುರುತಿಸಲಾಗಿದೆ ಎಂದರು.
ಸದನದ ಗಮನಕ್ಕೆ ತಾರದೆ ಪಟ್ಟಣ ವ್ಯಾಪಾರ ಸಮಿತಿಗೆ ನಗರ ಸಭೆ ಉಪಾಧ್ಯಕ್ಷೆ ಸಪ್ನಾ ಹರೀಶ್ ಅವರನ್ನು ನೇಮಿಸಿ ನಿರ್ಣಯ ಕೈಗೊಂಡ ಬಗ್ಗೆ ನಮಿತ ಆಕ್ಷೇಪ ವ್ಯಕ್ತಪಡಿಸಿದಾಗ ಸಭೆಯಲ್ಲಿ ಚರ್ಚೆ ನಡೆಯಿತು. ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರಾದ ಕುರಿತು ಜಬ್ಬಾರ್ ಆಕ್ಷೇಪ ವ್ಯಕ್ತಪಡಿಸಿದರು.
ಕೌನ್ಸಿಲರ್ ಖಲೀಲ್ ಮಾತನಾಡಿ, ಅಧಿಕಾರಿಗಳೇ ಇಲ್ಲದೆ ಇದ್ದರೆ ಸಮಸ್ಯೆ ಯಾರ ಬಳಿ ಕೇಳಬೇಕು ಎಂದು ಪ್ರಶ್ನಿಸಿದರು.
ನಗರಸಭೆಯಲ್ಲಿ ಅಧಿಕಾರಿಗಳ ಜತೆ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿದ ವಿಚಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದಿನಕರ್ ಉಳ್ಳಾಲ, ₹ 60 ಕೋಟಿ ವೆಚ್ಚದಲ್ಲಿ ಕಾಮಗಾರಿ ಆಗಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ. ಈ ಕಾಮಗಾರಿ ಎಲ್ಲಿ ಆಗಿದೆ ಎಂದು ಪ್ರಶ್ನಿಸಿದರು.
ಈ ವಿಚಾರದಲ್ಲಿ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.