ADVERTISEMENT

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ: ವಾರ್ಷಿಕ ₹ 372 ಕೋಟಿ ವ್ಯವಹಾರ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 14:16 IST
Last Updated 8 ಆಗಸ್ಟ್ 2022, 14:16 IST
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಮಾತನಾಡಿದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಮಾತನಾಡಿದರು.   

ಉಪ್ಪಿನಂಗಡಿ: ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ 2021-22ನೇ ಸಾಲಿನಲ್ಲಿ ದಾಖಲೆಯ ₹ 372.73 ಕೋಟಿ ವ್ಯವಹಾರ ಮಾಡಿದ್ದು, ಒಟ್ಟು ₹ 2.36 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ತಿಳಿಸಿದರು.

ಸಂಘದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಂಘವು ವರದಿ ಸಾಲಿನಲ್ಲಿ ₹ 76.31 ಕೋಟಿ ಠೇವಣಿ ಹೊಂದಿದ್ದು, 96.35 ಕೋಟಿ ಸಾಲ ವಿತರಿಸಿದೆ. ವರ್ಷಾಂತ್ಯದಲ್ಲಿ ಶೇ 97.65 ಸಾಲ ವಸೂಲಾತಿ ಆಗಿರುತ್ತದೆ. ಸಂಘವು ಆಡಿಟ್ ವರ್ಗೀಕರಣದಲ್ಲಿ ಸತತ ‘ಎ’ ಗ್ರೇಡ್‌ ಅನ್ನು ಪಡೆಯುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು.

ಸಂಘದ ಕೃಷಿ ಸಾಲಗಾರರನ್ನು ‘ಪಾಯಸ್’ (ವೈಯಕ್ತಿಕ ಅಪಘಾತ ವಿಮೆ) ವಿಮಾ ಮತ್ತು ಹವಾಮಾನ ಆಧಾರಿತ ವಿಮಾ ಯೋಜನೆಗೆ ಒಳಪಡಿಸಿರುತ್ತೇವೆ. ಎಲ್ಲಾ ರಸಗೊಬ್ಬರ ಉತ್ಪಾದಕ ಕಂಪನಿಗಳ ಡೀಲರ್‌ಶಿಪ್ ಪಡೆದುಕೊಂಡು ರಖಂ ನೆಲೆಯಲ್ಲಿ ಜಿಲ್ಲೆಯಾದ್ಯಂತ ಸ್ಪರ್ಧಾತ್ಮಕ ದರದಲ್ಲಿ ಸರಬರಾಜು ಮಾಡುತ್ತಿರುವ ಏಕೈಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಗಿದೆ ಎಂದರು.

ADVERTISEMENT

ಸಂಘದ ಮುಖ್ಯ ಕಚೇರಿಯ ಸಮೀಪ ಇಳಂತಿಲ ಗ್ರಾಮದಲ್ಲಿ 0.20 ಎಕ್ರೆ ಜಾಗವನ್ನು ಖರೀದಿಸಿದ್ದು, ವಿಸ್ತೃತ ಗೋದಾಮು ಕಟ್ಟಡದ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಅಮೃತ ಮಹೋತ್ಸವ ವರ್ಷಾಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿದೆ.
‘ವಿದ್ಯಾಶ್ರೀ’ ಎಂಬ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳಿಂದ ಸಂಘದ ಕಾರ್ಯವ್ಯಾಪ್ತಿಯ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ. ವಿದ್ಯಾರ್ಥಿಗಳಿಗೆ ಹಾಗೂ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಈ ಯೋಜನೆಯಡಿ 2021-22ರಲ್ಲಿ ಒಟ್ಟು 86 ವಿದ್ಯಾರ್ಥಿ/ವಿದ್ಯಾರ್ಥಿನಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ ಎಂದರು.

2021-22ನೇ ಸಾಲಿನಲ್ಲಿ ಸಂಘವು ಸಾಧಿಸಿದ ಗಣನೀಯ ಪ್ರಗತಿಗಾಗಿ ಸತತ 3ನೇ ಬಾರಿಗೆ ಡಿಸಿಸಿ ಬ್ಯಾಂಕ್‌ನ ಪ್ರಶಸ್ತಿಯನ್ನು ಪಡೆದಿರುತ್ತೇವೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ನಿರ್ದೇಶಕರಾದ ಯಶವಂತ ಜಿ, ಎಂ. ಜಗದೀಶ ರಾವ್, ದಯಾನಂದ ಎಸ್, ರಾಮ ನಾಯ್ಕ, ಸುಜಾತಾ ಆರ್.ರೈ, ಶ್ಯಾಮಲ ಶೆಣೈ, ರಾಜೇಶ್, ಕುಂಞ ಎನ್, ಸಚಿನ್ ಎಂ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ, ಲೆಕ್ಕಾಧಿಕಾರಿ ಪ್ರವೀಣ್ ಆಳ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.