ADVERTISEMENT

ಕಣ್ಣೂರು - ಮಂಗಳೂರು ರೈಲು ಸಂಚಾರ ಪುನರಾರಂಭಕ್ಕೆ ಆಗ್ರಹ

ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 15:16 IST
Last Updated 20 ನವೆಂಬರ್ 2021, 15:16 IST
ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದ ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದ ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.   

ಮಂಗಳೂರು: ಕಣ್ಣೂರು - ಮಂಗಳೂರು ನಡುವೆ ಚಲಿಸುವ ಪ್ಯಾಸೆಂಜರ್ ರೈಲನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಕೇಂದ್ರ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಮಂಗಳೂರು ನಗರವು ಶೈಕ್ಷಣಿಕ ಕೇಂದ್ರವಾಗಿದೆ. ಉತ್ತರ ಕೇರಳದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮಂಗಳೂರನ್ನು ಆಶ್ರಯಿಸಿದ್ದಾರೆ. ಈ ವಿದ್ಯಾರ್ಥಿಗಳು ದಿನನಿತ್ಯ ರೈಲಿನಲ್ಲಿ ಮಂಗಳೂರಿಗೆ ಬಂದು ವಿದ್ಯಾಭ್ಯಾಸ ಮಾಡುತ್ತಾರೆ. ಕೋವಿಡ್ ಕಾರಣ ಒಂದು ವರ್ಷದಿಂದ ಕಣ್ಣೂರು - ಮಂಗಳೂರು ನಡುವಿನ ಈ ರೈಲು ಸಂಚಾರ ರದ್ದಾಗಿದೆ ಎಂದು ತಿಳಿಸಿದರು.

ಈಗ ಕಾಲೇಜುಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಬಸ್‌ ಅವಲಂಬಿಸಬೇಕಾಗಿದೆ. ಪ್ರತಿದಿನ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಹೋಗಲು ₹ 150 ವೆಚ್ಚವಾಗುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ಖರ್ಚು ಭರಿಸಲು ಸಾಧ್ಯವಾಗದೆ, ವಾರದಲ್ಲಿ 2– 3 ದಿನ ಮಾತ್ರ ಕಾಲೇಜಿಗೆ ಬರುವಂತಹ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ರೈಲು ಸಂಚಾರವನ್ನು ಪುನಃ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಮಂಗಳೂರು ವಿಭಾಗ ಸಂಚಾಲಕ ಹರ್ಶಿತ್ ಕೊಯಿಲ, ಜಿಲ್ಲಾ ಸಂಚಾಲಕ ನಿಶಾನ್ ಆಳ್ವ, ಕಾರ್ಯಕರ್ತರಾದ ಮಧುರಾ, ಅನುಪ್ರಿಯಾ, ಹರೀಶ್ ಮಾತನಾಡಿದರು. ನಗರ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ವಿದ್ಯಾರ್ಥಿ ನಾಯಕರಾದ ಆದಿತ್ಯ ಶೆಟ್ಟಿ, ಆತ್ಮಿಕಾ, ಧರಣಿ, ಭವನೀಶ್, ಪ್ರಣಮ್, ನೀಲೇಶ್, ಶ್ರೀಪಾದ, ಚಂದನ್, ಸಂದೇಶ್ ರೈ ಮಜಕ್ಕಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.