ADVERTISEMENT

ಪ್ರತಿಭಾಗೆ ಅವಹೇಳನ: ಆರೋಪಿ ಬಂಧನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:47 IST
Last Updated 28 ಅಕ್ಟೋಬರ್ 2022, 7:47 IST
   

ಮಂಗಳೂರು: ಟೋಲ್ ಗೇಟ್‌ಗೆ ಸಂಬಂಧಿಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿ ಅವರ ವಿರುದ್ಧ ಸಾಮಾಜಿಕ ತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬಿಲ್ಲವ ಸಮಾಜದವರು ನಗರ ಪೊಲೀಸ್ ಆಯುಕ್ತರಿಗೆ ಗುರುವಾರ ಮನವಿ ಸಲ್ಲಿಸಿದರು.

ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದಲ್ಲಿ ಮುಂಚೂಣಿ ಯಲ್ಲಿದ್ದ ಪ್ರತಿಭಾ ಕುಳಾಯಿ ಅವರ ಮಾನಹಾನಿ ಮಾಡುವಂಥ ಪೋಸ್ಟ್ ಶ್ಯಾಮ್ ಸುದರ್ಶನ್ ಭಟ್ ಎಂಬುವರು ಫೇಸ್ ಬುಕ್ ನಲ್ಲಿ ಹಾಕಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಚಿತ್ರ ಹಾಕಿ ಫೋಟೋ ಹಾಕಿ ಲೈಂಗಿಕ ಸಂಕೇತಗಳಿರುವ ಬರಹವನ್ನು ಅದರೊಂದಿಗೆ ಹಾಕಿದ್ದಾರೆ. ಇದನ್ನು ಲೈಂಗಿಕ ದೌರ್ಜನ್ಯಕ್ಕೆ ಸಮಾನವಾಗಿರುವ ಪ್ರಕರಣ ಎಂದು ಪರಿಗಣಿಸಬೇಕು‌ ಎಂದು ಮನವಿಯಲ್ಲಿ ಕೋರಲಾಗಿದೆ.
ಮಹಿಳಾ ಸಮುದಾಯಕ್ಕೆ ಅವಮಾನ ಮಾಡುವ ಮತ್ತು ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸುವ ಇಂತಹ ಬರಹಗಳು ಸಮಾಜದ ಸ್ವಾಸ್ಥ್ಯ ಕೆಡಿಸುವುದರಲ್ಲಿ ಸಂದೇಹ ಇಲ್ಲ. ಭಿನ್ನಭಿಪ್ರಾಯಗಳಿದ್ದಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ವ್ಯಕ್ತ ಪಡಿಸುವ ಅವಕಾಶ ಇರುವಾಗ ಶ್ಯಾಮ್ ಸುದರ್ಶನ್ ಭಟ್ ಸಂಸ್ಕಾರ ಮರೆತು ಕಾನೂನು ಸುವ್ಯವಸ್ಥೆಗೇ ಸವಾಲೊಡ್ಡುವಂತೆ ವರ್ತಿಸಿದ್ದಾರೆ. ಅವರಿಗೆ ರಾಜಕೀಯವಾಗಿ ಪ್ರಬಲ ಬೆಂಬಲ ಇದೆ. ಹೀಗಾಗಿ ಘಟನೆ ನಡೆದು ಒಂದು ವಾರ ಕಳೆದರೂ ಅವರನ್ನು ಬಂಧಿಸಿಲ್ಲ. ಎಫ್ಐಆರ್ ಇದ್ದರೂ ಬಂಧಿಸಲು ಹಿಂದೇಟು ಹಾಕುತ್ತಿರುವುದು ಬೇಸರದ ವಿಷಯ. ಈ ವಿಳಂಬ ನೀತಿ ಮುಂದುರಿಸಿದರೆ ಸಮಾಜದ ಎಲ್ಲರನ್ನೂ ಸೇರಿಸಿಕೊಂಡು ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿದ ಪೊಲೀಸ್ ಆಯುಕ್ತ ಶಶಿಕುಮಾರ್, ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ತಲೆಮರೆಸಿಕೊಂಡು ಓಡಾಡುತ್ತಿರುವುದರಿಂದ ಬಂಧನ ತಡವಾಗುತ್ತಿದೆ ಎಂದರು.

ADVERTISEMENT

ಪದ್ಮರಾಜ್ ಆರ್, ಶೈಲೇಂದ್ರ ವೈ. ಸುವರ್ಣ, ರವಿ ಪೂಜಾರಿ ಚಿಲಿಂಬಿ, ಪದ್ಮನಾಭ ಕೋಟ್ಯಾನ್, ಹರೀಶ್ ಕೆ.ಪೂಜಾರಿ, ರಾಜೇಂದ್ರ ಚಿಲಿಂಬಿ, ದೀಪಕ್ ಪೆರ್ಮುದೆ, ಆನಂದ ಅಮೀನ್ ಕಾಟಿಪಳ್ಳ, ಗೋಪಾಲ ಬಂಗೇರ ಕುಳಾಯಿ, ರಂಜಿತ್ ಕುಮಾರ್, ಉಮೇಶ್ ಕೋಟ್ಯಾನ್, ಭರತೇಶ್ ಕಂಕನಾಡಿ, ವೇಣುಗೋಪಾಲ ಕೊಲ್ಯ, ಪ್ರಥ್ವಿರಾಜ್ ಉಜ್ಜೋಡಿ, ಉಮಾನಾಥ ಅಮೀನ್ ಕಾಟಿಪಳ್ಳ, ಯತೀಶ್ ಕುಮಾರ್ ಕೊಲ್ಯ, ರಾಜೇಶ್ ಕುಳಾಯಿ, ರವಿರಾಜ್ ದಂಬೆಲ್, ನೀಲಯ್ಯ ಪೂಜಾರಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.