ADVERTISEMENT

dnp ಧರ್ಮಸ್ಥಳದ ಧರ್ಮಾಧಿಕಾರಿಗೆ ರಾಜ್ಯಸಭೆಯ ಪಟ್ಟ

ಧರ್ಮಸ್ಥಳದ ಲಕ್ಷಾಂತರ ಭಕ್ತರಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:55 IST
Last Updated 7 ಜುಲೈ 2022, 4:55 IST
ವೀರೇಂದ್ರ ಹೆಗ್ಗಡೆ
ವೀರೇಂದ್ರ ಹೆಗ್ಗಡೆ   

ಮಂಗಳೂರು: ‘ನಾನು, ಮಾಡುವ ಕೆಲಸವನ್ನು ಆನಂದಿಸುತ್ತೇನೆ, ಹೀಗಾಗಿ ನನಗೆ ದಣಿವಾಗುವುದಿಲ್ಲ’ ಎಂದು ಸದಾ ಹೇಳುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದ ಭಕ್ತರು, ಗ್ರಾಮೀಣ ಜನರ ಏಳ್ಗೆಯಲ್ಲಿ ಆನಂದ ಕಾಣುವವರು.

ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ವಿನೂತನ ಕೊಡುಗೆ ನೀಡಿರುವ ವೀರೇಂದ್ರ ಹೆಗ್ಗಡೆ ಅಭಿವೃದ್ಧಿಯ ನೈಜ ಕಲ್ಪನೆಯನ್ನು ಸಮಾಜದಲ್ಲಿ ಬಿತ್ತಿದ ವ್ಯಕ್ತಿ. ಜಾತಿ, ಧರ್ಮಗಳನ್ನು ಮೀರಿ, ಸಮಾಜದಲ್ಲಿ ಅವರಿಗಿರುವ ಸ್ಥಾನ ಉನ್ನತವಾದದ್ದು. ಕ್ಷೇತ್ರದ ಭಕ್ತರಿಗೆ ಅವರು ನೆಚ್ಚಿನ ‘ಖಾವಂದರು’.

800 ವರ್ಷಗಳ ಧಾರ್ಮಿಕ ಪರಂಪರೆ ಇರುವ ಧರ್ಮಸ್ಥಳ ಕ್ಷೇತ್ರದ 21ನೇ ಧರ್ಮಾಧಿಕಾರಿಯಾಗಿ ತಮ್ಮ 20ನೇ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡಿರುವ ಅವರು, 50 ವರ್ಷ ಸುದೀರ್ಘ ಅವಧಿಯಲ್ಲಿ ಕೈಗೊಂಡಿರುವ ಸಾಮಾಜಿಕ ಕಾರ್ಯಗಳು ಹಲವಾರು. ಆಲದ ಮರದಂತೆ ರೆಂಬೆ–ಕೊಂಬೆ ಚಾಚಿರುವ ಅವರ ವೈವಿಧ್ಯ ಚಟುವಟಿಕೆಗಳು ಲಕ್ಷಾಂತರ ಕುಟುಂಬಗಳಿಗೆ ನೆರಳು ನೀಡಿವೆ.

ADVERTISEMENT

ಸರ್ವಧರ್ಮ ಸಮನ್ವಯ ಕೇಂದ್ರವಾಗಿರುವ ಧಾರ್ಮಿಕ ಕೇಂದ್ರವೊಂದು ನಾಡಿನ ಜನರ ಸರ್ವತೋಮುಖ ಅಭಿವೃದ್ಧಿಯನ್ನು ಹೇಗೆ ಮಾಡಬಹುದು ಎಂಬುದಕ್ಕೆ ಧರ್ಮಸ್ಥಳ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಿ ಹೆಗ್ಗಳಿಕೆ ಹೆಗ್ಗಡೆ ಅವರದಾಗಿದೆ. ಅವರು ಕಟ್ಟಿ ಬೆಳೆಸಿದ ಗುರುಕುಲ, ಬಾಲವಿಕಾಸ ಕೇಂದ್ರದಿಂದ, ವೃತ್ತಿಪರ ಶಿಕ್ಷಣದವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆದಿವೆ. ಭಾರತೀಯ ಸಂಸ್ಕೃತಿಯ ಯೋಗ, ಪ್ರಕೃತಿ ಚಿಕಿತ್ಸೆಯ ಶಿಕ್ಷಣ ಸಂಸ್ಥೆಗಳು ಕೂಡ ಇವೆ.

ಕನಸಿನ ಕೂಸು: 1982ರಲ್ಲಿ ಆರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹೆಗ್ಗಡೆ ಅವರ ಕನಸಿನ ಕೂಸು. ಕರಾವಳಿಯಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ಈಗ ರಾಜ್ಯವ್ಯಾಪಿ ವಿಸ್ತರಣೆಯಾಗಿದೆ. ಕೃಷಿಕ ಕುಟುಂಬಗಳು, ಪ್ರಗತಿಬಂಧು ಸ್ವಸಹಾಯ ಗುಂಪುಗಳು, ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ಮೆಟ್ಟಿಲಾಗಿದೆ. ಪ್ರಸ್ತುತ 6 ಲಕ್ಷ ಸ್ವ ಸಹಾಯ ಸಂಘಗಳಲ್ಲಿ 49 ಲಕ್ಷ ಸದಸ್ಯರು ಇದ್ದಾರೆ. ಗ್ರಾಮೀಣ ಮಹಿಳೆಯರು, ದುಡಿಯುವ ವರ್ಗದ ಜನರಲ್ಲಿ ಸ್ವಾಭಿಮಾನ, ಸ್ವಾವಲಂಬನೆಯ ಕಲ್ಪನೆ ಬಿತ್ತಿದ್ದು ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ದೇಶದ ವಿವಿಧೆಡೆಗಳಲ್ಲಿ 23 ಸ್ವ ಉದ್ಯೋಗ ತರಬೇತಿ ಕೇಂದ್ರಗಳು ಇವೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್‌ 25ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ.

ಉನ್ನತ ಗೌರವ: ಸಂಭ್ರಮ

ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ 1,500ಕ್ಕೂ ಅಧಿಕ ಮದ್ಯವರ್ಜನ ಶಿಬಿರಗಳನ್ನು ನಡೆಸಿ, 1.2 ಲಕ್ಷ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಕಾರಣರಾದವರು. ವೀರೇಂದ್ರ ಹೆಗ್ಗಡೆ ಸಾಮಾಜಿಕ ಕಾರ್ಯ ಗುರುತಿಸಿ, 1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ರಾಷ್ಟ್ರಪತಿಗಳಿಂದ ರಾಜರ್ಷಿ ಗೌರವ, 2009ರಲ್ಲಿ ಕರ್ನಾಟಕ ರತ್ನ, 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಮುಡಿಗೇರಿವೆ. ಪ್ರಸ್ತುತ ಕೇಂದ್ರ ಸರ್ಕಾರವು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದೆ. ಕ್ಷೇತ್ರದ ಜನರು, ಧರ್ಮಸ್ಥಳದ ಲಕ್ಷಾಂತರ ಭಕ್ತರು ‘ಖಾವಂದರಿಗೆ’ ಉನ್ನತ ಸ್ಥಾನ ದೊರೆತಿದ್ದನ್ನು ಸಂಭ್ರಮಿಸುತ್ತಿದ್ದಾರೆ.

ಚಟುವಟಿಕೆ ವಿಸ್ತರಿಸಲು ಅವಕಾಶ: ಹೆಗ್ಗಡೆ

‘ಸಂತೃಪ್ತಿಗಾಗಿ ಸೇವೆ ಮಾಡುತ್ತಿದ್ದೇನೆ. ಗ್ರಾಮೀಣ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರ, ಗ್ರಾಮೀಣ ಸೇವೆಯಲ್ಲಿ ಹಲವಾರು ಪ್ರಯೋಗಗಳು ಕರ್ನಾಟಕಕ್ಕೆ ಸೀಮಿತವಾಗಿದ್ದವು. ಈಗ ದೊರೆತ ಅವಕಾಶದಿಂದಾಗಿ ನಮ್ಮ ಯೋಜನೆ, ಕಾರ್ಯಕ್ರಮಗಳನ್ನು ದೇಶವ್ಯಾಪಿ ವಿಸ್ತರಿಸುವ ಸಾಧ್ಯತೆ ತೆರೆದುಕೊಂಡಿದೆ’ ಎಂದು ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.