ADVERTISEMENT

ಗ್ರಾ.ಪಂ. ಮಟ್ಟದಲ್ಲಿ ‘ವಿನಯ ಸಾಮರಸ್ಯ’

ಅಸ್ಪೃಶ್ಯತೆ ತೊಡೆದು ಹಾಕಲು ಸರ್ಕಾರದ ಯೋಜನೆ: ಸಚಿವ ಪೂಜಾರಿ

​ಪ್ರಜಾವಾಣಿ ವಾರ್ತೆ
Published 17 ಮೇ 2022, 13:52 IST
Last Updated 17 ಮೇ 2022, 13:52 IST
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. –ಪ್ರಜಾವಾಣಿ ಚಿತ್ರ
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. –ಪ್ರಜಾವಾಣಿ ಚಿತ್ರ   

ಮಂಗಳೂರು: ಅಸ್ಪೃಶ್ಯತೆ ತೊಡೆದುಹಾಕಿ, ಸಾಮಾಜಿಕ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳು ‘ವಿನಯ ಸಾಮರಸ್ಯ’ ಕಾರ್ಯಕ್ರಮವನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳವಾರ ಇಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಸ್ಪೃಶ್ಯತೆ ಮುಕ್ತ ಗ್ರಾಮ ಪಂಚಾಯಿತಿ ರಚನೆಗೆ ಈ ಕಾರ್ಯಕ್ರಮ ಅನುಕೂಲವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿಸಲು ಯೋಚಿಸಲಾಗಿದೆ’ ಎಂದರು.

ಕೊಪ್ಪಳದಲ್ಲಿ ಪರಿಶಿಷ್ಟ ಸಮುದಾಯದ ಯುವಕನಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಘಟನೆ ಹಿನ್ನೆಲೆಯಲ್ಲಿ, ಆತನ ಹೆಸರಿನಲ್ಲೇ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಯೋಜನೆ ಜಾರಿಗೊಳಿಸುವ ವೇಳೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪರಿಶಿಷ್ಟರ ಸಮಾವೇಶ
ಆಯೋಜಿಸಲಾಗುವುದು. ರಾಜ್ಯದ 6,020 ಗ್ರಾಮ ಪಂಚಾಯಿತಿಗಳ ಸಾಮಾಜಿಕ ನ್ಯಾಯ ಸಮಿತಿ ಹಾಗೂ ನಗರ ವ್ಯಾಪ್ತಿಯ ಎಸ್‍ಸಿ ಎಸ್‍ಟಿ ಕುಂದುಕೊರತೆ ಸಮಿತಿ ಸಹಕಾರದೊಂದಿಗೆ ಈ ಸಮಾವೇಶ ಸಂಘಟಿಸಲಾಗುತ್ತದೆ. ಅಸ್ಪೃಶ್ಯತೆ ಮುಕ್ತ ಗ್ರಾಮ ಪಂಚಾಯಿತಿ ರೂಪುಗೊಂಡರೆ, ₹ 25 ಲಕ್ಷದಿಂದ ₹ 50 ಲಕ್ಷದವರೆಗೆ ಬಹುಮಾನ ನೀಡಲು ಯೋಚಿಸಲಾಗಿದೆ ಎಂದು ಹೇಳಿದರು.

ADVERTISEMENT

ಅಂತ್ಯೋದಯ ಪರಿಕಲ್ಪನೆಯಲ್ಲಿ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಪಂಡಿತ್ ದೀನ್‍ದಯಾಳ್ ಹೆಸರಿನಲ್ಲಿ ರಾಜ್ಯದ ಐದು ಕಡೆಗಳಲ್ಲಿ ಶಿಕ್ಷಣ ಕೇಂದ್ರ ಸ್ಥಾಪಿಸಲಾಗುವುದು. ಒಂದು ಶಿಕ್ಷಣ ಕೇಂದ್ರದಲ್ಲಿ 1,000 ವಿದ್ಯಾರ್ಥಿಗಳಿಗೆ ವಸತಿ ನಿಲಯ ತೆರೆಯಲಾಗುವುದು. ವಿಶ್ವವಿದ್ಯಾಲಯಗಳ ಆವರಣಗಳಲ್ಲೇ ಇದನ್ನು ಸ್ಥಾಪಿಸಲು ಯೋಚಿಸಲಾಗಿದೆ. ಈ ವಸತಿ ನಿಲಯಗಳಲ್ಲಿ ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಮೀಸಲಾತಿ ಇಲ್ಲದ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಲಾಗುತ್ತದೆ. ಮಂಗಳೂರು,ಮೈಸೂರು, ಶಿವಮೊಗ್ಗ, ಧಾರವಾಡ ಹಾಗೂ ದಾವಣಗೆರೆಗಳಲ್ಲಿ ಈ ಶಿಕ್ಷಣ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ. ಕಳೆದ ವರ್ಷ 2,400 ವಸತಿ ನಿಲಯಗಳಲ್ಲಿ 2 ಲಕ್ಷ ವಿದ್ಯಾರ್ಥಿಗಳು ಇದ್ದರು. ಈ ಪೈಕಿ 1.20 ಲಕ್ಷ ವಿದ್ಯಾರ್ಥಿಗಳು ‘ವಿದ್ಯಾಸಿರಿ’ ಮೂಲಕ ನೆರವು ಪಡೆದಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ವಸತಿಗೆ ಅವಕಾಶ ಕಲ್ಪಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕಳೆದ ವರ್ಷ ಮಂಗಳೂರಿನ ಬಿಜೈ ಮತ್ತು
ಜಪ್ಪಿನಮೊಗರಿನಲ್ಲಿ ತಲಾ 125 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ವಸತಿ ನಿಲಯದ ಸೌಲಭ್ಯ ಕಲ್ಪಿಸಲಾಗಿತ್ತು. ಈ ಬಾರಿಯೂ ವಸತಿ ನಿಲಯದ ಕೊರತೆ ಎದುರಾಗಲಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕನಕದಾಸ ವಸತಿ ನಿಲಯ

ಈ ಬಾರಿಯ ಬಜೆಟ್‍ನಲ್ಲಿ ಘೋಷಿಸಲಾದ ಕನಕದಾಸ ವಸತಿ ನಿಲಯಗಳನ್ನು ರಾಜ್ಯದ 50 ಕಡೆಗಳಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ₹ 175 ಕೋಟಿ ವೆಚ್ಚದಲ್ಲಿ ಈ ವಸತಿ ನಿಲಯ ಸ್ಥಾಪನೆಯಾಗಲಿದೆ. ಅಂಬೇಡ್ಕರ್ ನಿಗಮದ ಮೂಲಕ ₹ 350 ಕೋಟಿ ವೆಚ್ಚದಲ್ಲಿ ವಿವಿಧೆಡೆಗಳಲ್ಲಿ 100 ವಸತಿ ನಿಲಯಗಳನ್ನು ಸ್ಥಾಪಿಸಲಾಗುತ್ತಿದೆ. ಮಂಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾರಾಯಣಗುರು ಹೆಸರಿನಲ್ಲಿ ವಸತಿ ಶಾಲೆ ಪ್ರಾರಂಭಿಸಲಾಗುವುದು. ಪ್ರತಿ ವಸತಿ ಶಾಲೆಗೆ ₹ 29 ಕೋಟಿ ಮೀಸಲಿಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.