ಮಂಗಳೂರು: ಲೋಗೊ ಬಿಡುಗಡೆ, ವಿವಿಧ ಯೋಜನೆಗಳ ಅನಾವರಣ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಗರದ ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಸ್ವರ್ಣ ಸಂಭ್ರಮ–ಸ್ವರ್ಣ ಜಯಂತಿ ವರ್ಷದ ಕಾರ್ಯಕ್ರಮಗಳ ಉದ್ಘಾಟನೆ ಭಾನುವಾರ ನಡೆಯಿತು.
ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಬ್ಯಾಂಕ್‌ಗಳು ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವುದು ಖುಷಿಯ ಸಂಗತಿ ಎಂದರು.
ವಿಶ್ವಕರ್ಮ, ಪ್ರಾಮಾಣಿಕರ ಸಮಾಜವಾಗಿದ್ದು ದೇವಸ್ಥಾನ ನಿರ್ಮಾಣ, ಶಿಲ್ಪಕಲೆ, ಚಿನ್ನದ ಕೆಲಸದ ಮೂಲಕ ದೇಶದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರಕುಮಾರ್, ವಿಶ್ವಕರ್ಮ ಸಹಕಾರ ಬ್ಯಾಂಕ್ ಒಳ್ಳೆಯ ರೀತಿಯಲ್ಲಿ ನಡೆದು ಬಂದ ಕಾರಣ ಸ್ವರ್ಣ ಜಯಂತಿ ಆಚರಿಸುವಂತಾಗಿದೆ. ಸ್ವರ್ಣ ಜಯಂತಿಯ ಎಲ್ಲ ಯೋಜನೆಗಳು ಯಶಸ್ವಿಯಾಗಬೇಕು ಎಂದು ಹಾರೈಸಿದರು.
ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಹರೀಶ್ ಆಚಾರ್ಯ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ನೇತೃತ್ವದಲ್ಲಿ ದಿ ಮಂಗಳೂರು ಗೋಲ್ಡ್ ಸ್ಮಿತ್ಸ್ ಕೊಆಪರೇಟಿವ್ ಸೊಸೈಟಿ ಹೆಸರಿನಲ್ಲಿ ಆರಂಭಗೊಂಡ ಸಂಸ್ಥೆ 2000ನೇ ಇಸವಿಯಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಎಂಬ ಹೆಸರು ಪಡೆಯಿತು. ಬ್ಯಾಂಕ್‌ನ ಸದಸ್ಯರು ಸಾವಿಗೀಡಾದರೆ ಕುಟುಂಬಕ್ಕೆ ₹ 10 ಸಾವಿರ ನೀಡುವ ಮರಣ ಸಾಂತ್ವನ ಯೋಜನೆ, ಸದಸ್ಯರಿಗೆ ₹ 2 ಲಕ್ಷ ನೀಡುವ ಅಪಘಾತ ಸಾಂತ್ವನ ವಿಮಾ ಯೋಜನೆ, ಕುಶಲಕರ್ಮಿ ಸದಸ್ಯರಿಗೆ ₹ 2 ಲಕ್ಷ ಒಡಿ ಸೌಲಭ್ಯ, ಐದು ಶಾಖೆಗಳಲ್ಲಿ 50 ವಾರ ತಲಾ 50 ಸ್ವಚ್ಛ ಭಾರತ್ ಕಾರ್ಯಕ್ರಮ ಮುಂದಿನ ಯೋಜನೆಗಳು ಎಂದು ತಿಳಿಸಿದರು.
ಕಟಪಾಡಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ, ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ಥಾಪಕ ಸದಸ್ಯ ಮುನಿಯಾಲ್ ದಾಮೋದರ ಆಚಾರ್ಯ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿಗಳಾದ ಪ್ರವೀಣ್ ಶೇಟ್ ನಾಗ್ವೇಕರ್, ಸವಿತಾ ರಾಮಕೃಷ್ಣ ಆಚಾರ್ಯ, ಉಪಾಧ್ಯಕ್ಷ ಜಗದೀಶ ಆಚಾರ್ಯ, ವ್ಯವಸ್ಥಾಪಕ ನಿರ್ದೇಶಕ ವಸಂತ ಅಡ್ಯಂತಾಯ ಪಾಲ್ಗೊಂಡಿದ್ದರು.
ಸ್ವರ್ಣ ಸಂಭ್ರಮದ ಲಾಂಛನ ಬಿಡುಗಡೆ ಮಾಡಲಾಯಿತು. ಸ್ವರ್ಣ ಸಂಭ್ರಮ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಅನಾವರಣ ಮಾಡಲಾಯಿತು. ಸ್ಥಾಪಕ ಸದಸ್ಯರನ್ನು ಸನ್ಮಾನಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಹರೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಭರತ್ ನಿಡ್ಪಳ್ಳಿ ವಂದಿಸಿದರು. ವಾರುಣಿ ಆಚಾರ್ಯ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.