ADVERTISEMENT

ಜನರ ನೋವಿಗೆ ಧ್ವನಿಯಾಗಿದ್ದರು ಸಲ್ಡಾನ: ಕೆ. ಶ್ರೀನಿವಾಸ ರಾವ್

ವಿಜೆಪಿ ಸಲ್ಡಾನ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:19 IST
Last Updated 14 ಆಗಸ್ಟ್ 2025, 6:19 IST
ಕೊಂಕಣಿ ಬರಹಗಾರ ವಿಜೆಪಿ ಸಲ್ಡಾನ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು 
ಕೊಂಕಣಿ ಬರಹಗಾರ ವಿಜೆಪಿ ಸಲ್ಡಾನ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು    

ಮಂಗಳೂರು: ಸಾಹಿತಿ ವಿಜೆಪಿ ಸಲ್ಡಾನ ಅವರ ಕೃತಿಗಳಲ್ಲಿ ಜನರ ನೋವು ಢಾಳಾಗಿ ಅಭಿವ್ಯಕ್ತಿಗೊಂಡಿದೆ. 1 ಲಕ್ಷ ಶಬ್ದಗಳಿರುವ ಕೊಂಕಣಿ ಶಬ್ದಕೋಶ ರಚಿಸುವ ಮೂಲಕ ಅವರು ಕೊಂಕಣಿ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ. ಶ್ರೀನಿವಾಸ ರಾವ್ ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ, ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮತ್ತು ವಿಷನ್ ಕೊಂಕಣಿ ಸಹಯೋಗದಲ್ಲಿ ಕೊಂಕಣಿ ಬರಹಗಾರ ವಿಜೆಪಿ ಸಲ್ಡಾನ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬುಧವಾರದಿಂದ ಎರಡು ದಿನ ಆಯೋಜಿಸಿರುವ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸಲ್ಡಾನ ಕೇವಲ ಕಾದಂಬರಿಕಾರರಲ್ಲ, ನಾಟಕ, ಪತ್ರಿಕೋದ್ಯಮ, ಸಾಮಾಜಿಕ ಕಳಕಳಿಯ ಬರಹಗಳಲ್ಲೂ ಅವರು ಹೆಜ್ಜೆಗುರುತು ಮೂಡಿಸಿದ್ದಾರೆ. ಇಂತಹ ಸಾಧಕ ಸಾಹಿತಿಗಳು ಯುವ ಜನರಿಗೆ ಸ್ಫೂರ್ತಿಯಾಗಬೇಕು. ಆ ಕಾರಣಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು 24 ಭಾಷೆಗಳಲ್ಲಿ ಸಾಹಿತ್ಯ ಸಾಧನೆ ಮಾಡಿದವರನ್ನು ಗುರುತಿಸುವ, ಕಾರ್ಯಕ್ರಮಗಳಿಗೆ ಸಹಯೋಗ ನೀಡುವ ಕ್ರಮ ಅನುಸರಿಸಿಕೊಂಡು ಬಂದಿದೆ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸೇಂಟ್ ಅಲೋಶಿಯಸ್ ವಿವಿ ಕುಲಪತಿ ಪ್ರವೀಣ್ ಮಾರ್ಟಿಸ್ ಮಾತನಾಡಿ, ಕೊಂಕಣಿ ಭಾಷೆ, ಸಾಹಿತ್ಯದ ಜೊತೆಗೆ ಮಾಧ್ಯಮ ಕ್ಷೇತ್ರಕ್ಕೆ ವಿಜೆಪಿ ಸಲ್ಡಾನ ಅವರ ಕೊಡುಗೆ ಅಪಾರ. ಅವರ ಕೃತಿಗಳಲ್ಲಿ ವ್ಯಕ್ತವಾಗಿರುವ ಸಮಾಜಮುಖಿ ಯೋಚನೆಗಳು, ಸಾಮಾಜಿಕ ಬದ್ಧತೆ ನವ ತಲೆಮಾರಿಗೆ ಪ್ರೇರಣೆಯಾಗಬೇಕು ಎಂದರು.

ಫಾ. ಪ್ರವೀಣ್ ಪಿಂಟೊ ಮುಖ್ಯ ಭಾಷಣ ಮಾಡಿದರು. ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಫಾ. ಮೆಲ್ವಿನ್ ಪಿಂಟೊ, ಮೆಲ್ವಿನ್ ರೋಡ್ರಿಗಸ್ ಮುಖ್ಯ ಅತಿಥಿಯಾಗಿದ್ದರು. ಓಂ ಪ್ರಕಾಶ್ ನಾಗರ್ ವಂದಿಸಿದರು.

Quote - ಕೊಂಕಣಿ ಸಾಹಿತ್ಯಕ್ಕೆ ಉಜ್ವಲ ಭವಿಷ್ಯ ಇದ್ದು ಯುವಜನರು ಗಂಭೀರ ಬರವಣಿಗೆಯ ಬಗ್ಗೆ ಯೋಚಿಸಬೇಕು. ಶ್ರೀನಿವಾಸ ರಾವ್ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ

ಹಳ್ಳಿಗಳಲ್ಲಿ ‘ಗ್ರಾಮ ಲೋಕ’

ಕೇಂದ್ರ ಸಾಹಿತ್ಯ ಅಕಾಡೆಮಿಯು ವರ್ಷಕ್ಕೆ 600ಕ್ಕೂ ಹೆಚ್ಚು ಸಾಹಿತ್ಯ ಕಾರ್ಯಕ್ರಮ 500ಕ್ಕೂ ಅಧಿಕ ಪುಸ್ತಕ ಪ್ರಕಟಣೆ ಮಾಡುತ್ತಿದೆ. ಸಾಹಿತ್ಯ ಚಟುವಟಿಕೆಗಳು ದೊಡ್ಡ ನಗರಕ್ಕೆ ಮಾತ್ರ ಸೀಮಿತ ಆಗಬಾರದೆಂಬ ಉದ್ದೇಶದಿಂದ ‘ಗ್ರಾಮ ಲೋಕ’ ಕಾರ್ಯಕ್ರಮ ರೂಪಿಸಿದೆ. ದೇಶದಲ್ಲಿ 6 ಲಕ್ಷಕ್ಕೂ ಅಧಿಕ ಹಳ್ಳಿಗಳು ಇದ್ದು ಆಯ್ದ ಹಳ್ಳಿಗಳಲ್ಲಿ ಸಾಹಿತ್ಯ ಹಬ್ಬ ವಿಚಾರ ಸಂಕಿರಣ ಸಾಹಿತಿಗಳ ಪರಿಚಯ ಪ್ರತಿಭಾನ್ವೇಷಣೆ ಕವಿತೆ ವಾಚನದಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈವರೆಗೆ ದೇಶದಾದ್ಯಂತ 250ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು ಕರ್ನಾಟಕದಲ್ಲಿ 20ರಷ್ಟು ನಡೆದಿವೆ. ಪಟ್ನಾದಲ್ಲಿ ಅಂತರರಾಷ್ಟ್ರೀಯ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶ್ರೀನಿವಾಸ ರಾವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.