ADVERTISEMENT

ಮತದಾರರ ಪಟ್ಟಿ: 29,410 ಹೆಸರು ಸೇರ್ಪಡೆ

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಭಿಯಾನದಲ್ಲಿ 62,829 ಅರ್ಜಿಗಳು ಸಲ್ಲಿಕೆ: ಡಿಸಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 13:45 IST
Last Updated 8 ಡಿಸೆಂಬರ್ 2022, 13:45 IST
ಎಂ.ಆರ್‌.ರವಿಕುಮಾರ್‌
ಎಂ.ಆರ್‌.ರವಿಕುಮಾರ್‌   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್‌ 9ರಿಂದ ಡಿಸೆಂಬರ್‌ 7ರವರೆಗೆ ನಡೆದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಭಿಯಾನದಲ್ಲಿ ಒಟ್ಟು 29,410 ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದ್ದು, 73,783 ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 62,829 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 16,065 ಅರ್ಜಿಗಳನ್ನು ಕ್ಷೇತ್ರ ಪರಿಶೀಲನೆಗೆ ವಹಿಸಲಾಗಿದೆ. 31,316 ಅರ್ಜಿಗಳ ಪರಿಶೀಲನೆ ಕಾರ್ಯ ಮುಗಿದಿದೆ. 1,449 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 8,173 ಅರ್ಜಿಗಳು ಸ್ವೀಕೃತಗೊಂಡಿವೆ. ಬಿಎಲ್‌ಎಗಳು ಮನೆಗಳಿಗೆ ಭೇಟಿ ನೀಡಿ ಅರ್ಜಿ ಪರಿಶೀಲನೆ ಕಾರ್ಯ ಮಾಡಿದ್ದಾರೆ’ ಎಂದರು.

ಮೃತಪಟ್ಟವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕಾರ್ಯ ಸುಮಾರು ಒಂದು ದಶಕದಿಂದ ಜಿಲ್ಲೆಯಲ್ಲಿ ಆಗಿರಲಿಲ್ಲ. ಇದು ಕೂಡ ಕೆಲವೊಮ್ಮೆ ಮತದಾನದ ವೇಳೆ ಶೇಕಡಾವಾರು ಪ್ರಮಾಣವೂ ಕಡಿಮೆಯಾಗಲು ಕಾರಣವಾಗುತ್ತದೆ. ಮರಣ ಹೊಂದಿದವರ ಹೆಸರನ್ನು ಪಟ್ಟಿಯಿಂದ ಕಡಿತಗೊಳಿಸುವಂತೆ ರಾಜಕೀಯ ಪಕ್ಷಗಳ ಏಜೆಂಟರು ಕೂಡ ಒತ್ತಾಯಿಸಿದ್ದರು. ಜಿಲ್ಲೆಯಲ್ಲಿ ಮತದಾರರ ಹೆಸರು ಡಿಲೀಟ್ ಆಗಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದರು.

ADVERTISEMENT

ಮತಗಟ್ಟೆ ಏಜೆಂಟರನ್ನು ನೇಮಿಸುವಂತೆ ರಾಜಕೀಯ ಪಕ್ಷಗಳಿಗೆ ತಿಳಿಸಲಾಗಿದ್ದು, ಬಿಜೆಪಿ 1,761, ಕಾಂಗ್ರೆಸ್ 1,000ದಷ್ಟು ಏಜೆಂಟರನ್ನು ನೇಮಿಸಿವೆ. ಜೆಡಿಎಸ್ ಕೂಡ ಏಜೆಂಟರನ್ನು ನೇಮಿಸಿದೆ. ಕರಡು ಮತದಾರರ ಪಟ್ಟಿ ಪರಿಶೀಲಿಸಿ ಅರ್ಹ ಮತದಾರರು ಇರುವುದನ್ನು ಖಾತರಿಪಡಿಸಲು ಏಜೆಂಟರಿಗೆ ಸೂಚಿಸಲಾಗಿದೆ. ಮರಣ ಹೊಂದಿದ ಕೆಲವರ ಮರಣ ಪ್ರಮಾಣಪತ್ರ ಲಭ್ಯ ಇಲ್ಲದಿದ್ದಲ್ಲಿ ಆಯಾ ಸ್ಥಳೀಯ ಪಂಚಾಯಿತಿ ಮೂಲಕ ಅದನ್ನು ಡೌನ್‌ಲೋಡ್ ಮಾಡಿಕೊಂಡು ಸಲ್ಲಿಸುವಂತೆ ಕೂಡ ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಸ್ತಾಪಿತ ಕರಡು ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 9,845 ಯುವ ಮತದಾರರು ಇದ್ದಾರೆ. ಪರಿಷ್ಕರಣೆಯ ಸಂದರ್ಭದಲ್ಲಿ 21,000 ಮಂದಿಯಿಂದ ಅರ್ಜಿ ಬಂದಿದೆ. ಅದನ್ನು ಪರಿಶೀಲನೆ ಮಾಡಲಾಗುತ್ತಿದೆ. ಎರಡು ಕ್ಷೇತ್ರಗಳಲ್ಲಿ ಮತದಾರರ ಚೀಟಿಯನ್ನು ಹೊಂದಿದ್ದ 27 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.

ವಿಐಪಿ ಮತದಾರರು: ಜಿಲ್ಲೆಯಲ್ಲಿ ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕರು, ಸಂಸದರು ಸೇರಿದಂತೆ ಸುಮಾರು 1,119 ವಿಐಪಿ ಮತದಾರರನ್ನು ಗುರುತಿಸಲಾಗಿದೆ. ಇನ್ನೂ ಹೆಚ್ಚು ವಿಐಪಿ ಮತದಾರರು ಇರಬಹುದು. ಇವರೆಲ್ಲರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿ, ಒಂದೊಮ್ಮೆ ಬಿಟ್ಟು ಹೋಗಿದ್ದಲ್ಲಿ ಸೇರ್ಪಡೆ ಮಾಡಲು ಸೂಚಿಸಲಾಗಿದೆ ಎಂದು ರವಿಕುಮಾರ್ ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.