ADVERTISEMENT

ಮಂಗಳೂರು: ಮಳೆಗಾಲದಲ್ಲಿ ‘ತೇಲುವ ಮನೆಗಳು’

ಸಂಧ್ಯಾ ಹೆಗಡೆ
Published 26 ಜೂನ್ 2025, 7:04 IST
Last Updated 26 ಜೂನ್ 2025, 7:04 IST
ಹಂಚಿನಮನೆ ನಾಗಬನದ ಸಮೀಪ ಕಾಲುವೆಯಲ್ಲಿ ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿರುವ ಪೈಪ್‌ಗಳಿಗೆ ಸಿಲುಕಿರುವ ಕಸ
ಹಂಚಿನಮನೆ ನಾಗಬನದ ಸಮೀಪ ಕಾಲುವೆಯಲ್ಲಿ ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿರುವ ಪೈಪ್‌ಗಳಿಗೆ ಸಿಲುಕಿರುವ ಕಸ   

ಮಂಗಳೂರು: ಅರ್ಧಗಂಟೆ ಮಳೆ ಬಂದರೆ ಇಲ್ಲಿ ನೀರು ಮನೆ ಅಂಗಳವನ್ನು ಆವರಿಸುತ್ತದೆ. ಮನೆಗಳು ತೇಲುತ್ತಿರುವಂತೆ ಭಾಸವಾಗುತ್ತವೆ. ಚರಂಡಿ ಸೇರುವ ಕೊಳಚೆ ನೀರು ಉಕ್ಕಿ ಮಳೆ ನೀರಿನೊಂದಿಗೆ ಸೇರಿ, ಇಡೀ ಪರಿಸರ ದುರ್ನಾತವಾಗುತ್ತದೆ!

ಇದು ನಗರದ ದೇರೆಬೈಲ್ ಪೂರ್ವ ವಾರ್ಡ್‌ ವ್ಯಾಪ್ತಿಯಲ್ಲಿರುವ ಹಂಚಿನಮನೆ ನಾಗಬನದ ಸುತ್ತಮುತ್ತಲಿನ ನಿವಾಸಿಗಳ ಗೋಳು.

ಇಲ್ಲಿನ ಮುಖ್ಯ ಚರಂಡಿಯು ಕೆಲವು ಕಡೆಗಳಲ್ಲಿ ಕಿರಿದಾಗಿದೆ. 20 ಅಡಿ ಅಗಲ ಇರುವ ಚರಂಡಿ ಕೆಲವು ಕಡೆಗಳಲ್ಲಿ ಐದು ಅಡಿಯಷ್ಟು ಕಿರಿದಾಗಿದೆ. ಮಳೆಗಾಲದಲ್ಲಿ ಚರಂಡಿ ಸೇರುವ ನೀರು, ಹಿಮ್ಮುಖ ಒತ್ತಡದಿಂದ ರಸ್ತೆ, ಮನೆಗಳಿಗೆ ನುಗ್ಗುತ್ತದೆ ಎನ್ನುತ್ತಾರೆ ಸ್ಥಳೀಯರು. ‘ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಮನೆ ಎದುರು ಚರಂಡಿಗೆ ನಿರ್ಮಿಸಿರುವ ಕಲ್ವರ್ಟ್ ಅನ್ನು ತೆಗೆದು ಅಗಲಗೊಳಿಸುವುದಾಗಿ ಹೇಳಿದ್ದರು, ಅವರಾಗಿಯೇ ಬಂದಿದ್ದು, ನಾವೇನು ಬೇಡಿಕೆ ಸಲ್ಲಿಸಿದ್ದಲ್ಲ. ಆದರೆ, ಕೆಲಸ ಮಾತ್ರ ಆಗಿಲ್ಲ. ಉಳ್ಳವರ ಮನೆ ಎದುರು ರಸ್ತೆ ಅಗಲವಾಗಿ, ಚರಂಡಿ ಕಿರಿದಾಗುತ್ತದೆ. ನಿರಂತರವಾಗಿ ಮಳೆ ಸುರಿದರೆ ಮನೆ ಸುತ್ತ ಸರೋವರ ನಿರ್ಮಾಣವಾಗುತ್ತದೆ’ ಎಂದು ಬೇಸರಿಸಿದರು ಪುನ್ಕೆದಡಿ ಸಮೀಪದ ನಿವಾಸಿ ಮೀನಾಕ್ಷಿ.

ADVERTISEMENT

‘ಮಳೆಗಾಲದಲ್ಲಿ ಪ್ರವಾಹದ ಸಮಸ್ಯೆ ಬೇಸಿಗೆಯಲ್ಲಿ ಇನ್ನೊಂದು ಸಮಸ್ಯೆ. ರಸ್ತೆ ಮಧ್ಯೆ ಇರುವ ಮ್ಯಾನ್‌ಹೋಲ್‌ನಿಂದ ಕೊಳಚೆ ನೀರು ಉಕ್ಕುತ್ತದೆ. ಅಸಹ್ಯ ವಾಸನೆ ಇಡೀ ಪರಿಸರವನ್ನು ಆವರಿಸುತ್ತದೆ. ವಾಸನೆ ತಡೆಯಲಾಗದೆ ಸ್ವಂತ ಖರ್ಚಿನಲ್ಲಿ ಕೊಳಚೆಯನ್ನು ತೆಗೆಸಿದೆವು. ಸಂಜೆ ಆಗುತ್ತಿದ್ದಂತೆ ವಿಪರೀತ ಸೊಳ್ಳೆಕಾಟ’ ಎಂದು ಹಂಚಿನಮನೆ ನಾಗಬನ ಸಮೀಪದ ನಿವಾಸಿಯೊಬ್ಬರು ಹೇಳಿದರು.

‘ಹಲವರು ಮನೆಯ ಹೊಲಸು ನೀರನ್ನು ತೋಡಿಗೆ ಬಿಡುತ್ತಾರೆ, ಮುಟ್ಟಿನ ಬಟ್ಟೆ, ಮಕ್ಕಳ ಡೈಪರ್ ಅನ್ನು ಕಮೋಡ್‌ನಲ್ಲಿ ಹಾಕುತ್ತಾರೆ. ಇಂತಹ ಘನವಸ್ತುಗಳು ಸೇರಿ ಚರಂಡಿ ಬ್ಲಾಕ್ ಆಗುತ್ತದೆ. ಮನೆಯ ಹೊಲಸು ನೀರನ್ನು ತೋಡಿಗೆ ಬಿಡುವುದನ್ನು ತಡೆಗಟ್ಟಬೇಕು. ಸಾರ್ವಜನಿಕರೂ ಈ ಬಗ್ಗೆ ಅರಿವು ಹೊಂದಬೇಕು’ ಎಂಬುದು ಸ್ಥಳೀಯರಾದ ಗೋಪಾಲ್ ಅವರ ಅಭಿಪ್ರಾಯ.

‘ಇಲ್ಲಿ ಮನೆ ಕಟ್ಟಿ 20 ವರ್ಷಗಳಾದವು. ಮೊದಲು ನೆರೆಯ ಸಮಸ್ಯೆ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಬಂತೆಂದರೆ ಭಯ ಹುಟ್ಟುತ್ತದೆ. ಅರ್ಧಗಂಟೆ ಮಳೆ ಬಂದರೆ ಮನೆಯಂಗಳಕ್ಕೆ ನೀರು ಬರುತ್ತದೆ. ಮಳೆ ಇನ್ನೂ ಜೋರಾದರೆ, ಅಂಗಳ ದಾಟಿ ಜಗುಲಿಗೆ ನೀರು ಏರುತ್ತದೆ. ಮಾಜಿ ಸಚಿವ, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬರು, ತೋಡಿಗೆ ಅರ್ಧ ಅಡಿ ಪೈಪ್ ಹಾಕಿ, ಮಣ್ಣು ಮುಚ್ಚಿದ್ದಾರೆ. ಇದರಿಂದ ಮಳೆ ನೀರು ಸರಾಗವಾಗಿ ಹರಿಯುವುದಿಲ್ಲ’ ಎಂದು ಮಾಲೆಮಾರ್ ರಾಕ್‌ ಪ್ಯಾಲೇಸ್ ಸಮೀಪದ ಮಹಿಳೆಯೊಬ್ಬರು ಅಲವತ್ತುಕೊಂಡರು.

ಪಾಲಿಕೆ ಚರಂಡಿಯನ್ನು ಸಕಾಲಕ್ಕೆ ಸ್ವಚ್ಛಗೊಳಿಸಬೇಕು. ಸಾರ್ವಜನಿಕರೂ ಪ್ರಜ್ಞಾವಂತರಾಗಿ ಮನೆಯ ಹೊಲಸು ನೀರನ್ನು ತೋಡಿಗೆ ಬಿಡಬಾರದು.
ಗೋಪಾಲ್ ಸ್ಥಳೀಯ ನಿವಾಸಿ
ಚರಂಡಿಯ ಚೇಂಬರ್ ಅನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದರೆ ರಸ್ತೆ ಮೇಲೆ ಕೊಳಚೆ ನೀರು ಅದರಿಂದ ಆಗುವ ದುರ್ನಾತ ತಪ್ಪುತ್ತದೆ.
ದೇವದಾಸ್ ಸ್ಥಳೀಯ ನಿವಾಸಿ
‘ಜನರಲ್ಲೂ ಜಾಗೃತಿ ಅಗತ್ಯ’
‘ನಮ್ಮ ವಾರ್ಡ್‌ನಲ್ಲಿ ಚರಂಡಿ ಸಮಸ್ಯೆ ಬೃಹದಾಕಾರವಾಗಿದೆ. ಶೇ 80ರಷ್ಟು ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದೇನೆ. ಮಳೆಗಾಲದಲ್ಲಿ ಚರಂಡಿಯ ತಡೆಗೋಡೆ ಬೀಳುತ್ತಿರುವುದು ಸವಾಲಾಗಿದೆ. ಮಳೆಗಾಲದಲ್ಲಿ ಪರಪಾದೆಯ ಕೆಲವು ಮನೆಗಳ ಒಳಗೆ ಕೊಳಚೆ ನೀರು ನುಗ್ಗುತ್ತಿತ್ತು. ಇದಕ್ಕೆ ಶಾಶ್ವತ ಪರಿಹಾರ ಒದಗಿಸಲಾಗಿದೆ. ಸಾರ್ವಜನಿಕರು ಮನೆಯ ಹೊಲಸು ನೀರನ್ನು ಜೊತೆಗೆ ಮಳೆ ನೀರನ್ನು ಚರಂಡಿಗೆ ಬಿಡಬಾರದು. ಇದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ. ಜನರಲ್ಲೂ ಜಾಗೃತಿ ಮೂಡಬೇಕು’ ಎನ್ನುತ್ತಾರೆ ವಾರ್ಡ್‌ನ ನಿಕಟಪೂರ್ವ ಸದಸ್ಯೆ ರಂಜನಿ ಕೋಟ್ಯಾನ್. ವಾರ್ಡ್‌ನ ಬಹುತೇಕ ಕಡೆಗಳಲ್ಲಿ ರಸ್ತೆ ನಿರ್ಮಿಸಲಾಗಿದೆ. ಹೊಸ ಬಡಾವಣೆಗಳಲ್ಲಿ ರಸ್ತೆ ನಿರ್ಮಾಣ ಬಾಕಿ ಉಳಿದಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.