ADVERTISEMENT

ಮನೆ ಜಪ್ತಿಗೆ ಬಂದಿದ್ದ ಬ್ಯಾಂಕ್‌ ಅಧಿಕಾರಿಗಳು: ಮನೆಯೊಡತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 14:02 IST
Last Updated 18 ಫೆಬ್ರುವರಿ 2021, 14:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಪುತ್ತೂರು: ಬ್ಯಾಂಕ್ ಅಧಿಕಾರಿಗಳು ಮನೆ ಜಪ್ತಿಗೆ ಬಂದಿದ್ದರಿಂದ ಆತಂಕಗೊಂಡ ಮನೆ ಮಾಲೀಕನ ಪತ್ನಿ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುವಾರ ನಗರದ ಹಾರಾಡಿ ರೈಲ್ವೆ ರಸ್ತೆಯ ಬಳಿ ಇರುವ ಉದ್ಯಮಿ ರಘುವೀರ್ ಪ್ರಭು ಅವರ ಪತ್ನಿ ಪ್ರಾರ್ಥನಾ ಪ್ರಭು (52) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಘುವೀರ ಪ್ರಭು ಪಡೆದ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕಿನವರು ಕೋರ್ಟ್‌ ಆದೇಶದೊಂದಿಗೆ ಮನೆಗೆ ಬಂದಿದ್ದರು. ಈ ವೇಳೆ ಪ್ರಾರ್ಥನಾ ಪ್ರಭು, ಕೊಠಡಿಗೆ ಹೋಗಿ ಲಾಕ್ ಮಾಡಿ, ‘ಕೆನರಾ ಬ್ಯಾಂಕಿನವರ ಉಪದ್ರ, ಮೆಂಟಲ್ ಟಾರ್ಚರ್ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಮರಣಪತ್ರ ಬರೆದಿಟ್ಟು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭದ್ರತೆ ಒದಗಿಸಲು ಬಂದಿದ್ದ ಪೊಲೀಸರು ನೇಣು ಬಿಗಿದ ಸ್ಥಿತಿಯಲ್ಲಿದ್ದ ಪ್ರಾರ್ಥನಾ ಪ್ರಭು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು.

ADVERTISEMENT

ಈ ಎಲ್ಲ ವಿದ್ಯಮಾನಗಳ ಬಳಿಕ ರಘುವೀರ್ ಪ್ರಭು, ‘ಸಾಲದ ವಿಚಾರ ಕೋರ್ಟ್‌ನಲ್ಲಿದೆ. ಸಾಲಗಾರರಲ್ಲದ ನನ್ನ ಮಕ್ಕಳಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲು ಬಂದಿರುವುದು ಕಾನೂನು ಬಾಹಿರವಾಗಿದೆ’ ಎಂದರು. ನಂತರ ಮನೆ ಜಪ್ತಿ ಮಾಡಿದ ಕೀ ಅನ್ನು ರಘುವೀರ್ ಅವರ ಮಕ್ಕಳಿಗೆ ಬ್ಯಾಂಕ್‌ ಅಧಿಕಾರಿಗಳು ಹಸ್ತಾಂತರಿಸಿದರು. ಘಟನೆಯ ಕುರಿತು ಮೃತರ ಪತಿ ರಘುವೀರ್ ಪ್ರಭು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.