
ಬೆಳ್ತಂಗಡಿ: ಪಟ್ರಮೆ ಗ್ರಾಮದ ಪಟ್ಟೂರು ಬಳಿ ಗೋ ಕಾಯ್ದೆಯ ಹೆಸರಿನಲ್ಲಿ ಅಮಾಯಕ ಮಹಿಳೆಯರನ್ನು ಸಿಲುಕಿಸಿ ಅವರ ಮನೆ ಜಪ್ತಿ ಮಾಡಿದ ಪೊಲೀಸರ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ಘಟನೆಯನ್ನು ಖಂಡಿಸಲಾಯಿತು.
ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್ ವಹಿಸಿದ್ದರು.
ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ತಾಲ್ಲೂಕಿನಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ. ಗೋ ಹತ್ಯೆಯ ಹೆಸರಿನಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಮಸೀದಿಗೆ ಪೊಲೀಸರು ಬಂದು ಸಮುದಾಯಕ್ಕೆ ಅವಮಾನವಾಗುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ದ್ವೇಷ ಭಾಷಣದ ಹೆಸರಿನಲ್ಲಿ ಹಿಂದೂ ನಾಯಕರು ವಿರುದ್ಧ ಆಗುವ ಕೇಸಿಗೆ ಪ್ರತಿಯಾಗಿ ಮುಸ್ಲಿಂ ನಾಯಕರ ವಿರುದ್ಧ ಸುಳ್ಳುಕೇಸು ಹಾಕಿ ಯಾರನ್ನೋ ಸಮಾಧಾನಪಡಿಸಲಾಗುತ್ತಿದೆ. ಈ ಎಲ್ಲಾ ಘಟನೆಗಳ ಬಗ್ಗೆ ಮೇಲಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸುವುದು ಇತ್ಯಾದಿ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅಕ್ಬರ್ ಬೆಳ್ತಂಗಡಿ, ಸಲೀಂ ಸುನ್ನತ್‌ಕೆರೆ, ಕರೀಂ ಗೇರುಕಟ್ಟೆ, ಅಝರ್ ನಾವೂರು, ಕೆ.ಎಸ್ ಅಬ್ದುಲ್ಲ ಕರಾಯ, ಲೆತೀಫ್ ಹಾಜಿ ಗುರುವಾಯನಕೆರೆ, ಮುಸ್ತಾಫ ಗುರುವಾಯನಕೆರೆ, ನವಾಝ್ ಕಟ್ಟೆ, ನಿಸಾರ್ ಕುದ್ರಡ್ಕ, ರಮೀಝ್ ಬೆಳ್ತಂಗಡಿ, ಉಮರ್ ಜಿ.ಕೆ, ಶಮೀಮ್ ಯೂಸುಫ್ ಮದ್ದಡ್ಕ, ಅಶ್ರಫ್ ಆಲಿಕುಂಞಿ ಮುಂಡಾಜೆ, ಹನೀಫ್ ಪುಂಜಾಲಕಟ್ಟೆ, ಅಶ್ರಫ್ ಕಟ್ಟೆ, ಲೆತೀಫ್ ಪರಿಮ ಗೇರುಕಟ್ಟೆ, ಅಬ್ದುಲ್ ರಹಿಮಾನ್ ಪಡ್ಪು, ಸಾಲಿಹ್ ಮದ್ದಡ್ಕ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.