ADVERTISEMENT

‘ಬ್ಯಾರಿ ಯಕ್ಷಗಾನಕ್ಕೆ ಅಕಾಡೆಮಿಯಿಂದ ನೆರವು’

ಯಕ್ಷಾಂಗಣದಿಂದ ಅಳಪೆ ಶ್ರೀನಿವಾಸ ಭಟ್ - ಶಾರದಾ ಸಂಸ್ಮರಣೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 13:59 IST
Last Updated 19 ನವೆಂಬರ್ 2019, 13:59 IST
ಮಂಗಳೂರಿನ ಪುರಭವನದಲ್ಲಿ ಆಯೋಜಿಸಿರುವ ಯಕ್ಷಗಾನ ತಾಳಮದ್ದಲೆ ಸಪ್ತಾಹದಲ್ಲಿ ಸಂಸ್ಮರಣಾ ಕಾರ್ಯಕ್ರಮವನ್ನು ಬೊಂಡಾಲ ಸಚ್ಚಿದಾನಂದ ಶೆಟ್ಟಿ ಉದ್ಘಾಟಿಸಿದರು.
ಮಂಗಳೂರಿನ ಪುರಭವನದಲ್ಲಿ ಆಯೋಜಿಸಿರುವ ಯಕ್ಷಗಾನ ತಾಳಮದ್ದಲೆ ಸಪ್ತಾಹದಲ್ಲಿ ಸಂಸ್ಮರಣಾ ಕಾರ್ಯಕ್ರಮವನ್ನು ಬೊಂಡಾಲ ಸಚ್ಚಿದಾನಂದ ಶೆಟ್ಟಿ ಉದ್ಘಾಟಿಸಿದರು.   

ಮಂಗಳೂರು: ‘ವಿವಿಧ ಭಾಷೆಗಳಲ್ಲಿ ಬಳಕೆಯಾಗುವ ಯಕ್ಷಗಾನ ಬ್ಯಾರಿ ಭಾಷೆಯಲ್ಲೂ ಬರಬೇಕು. ಅದಕ್ಕೆ ಅಕಾಡೆಮಿ ನೆರವು ನೀಡಲು ಸಿದ್ಧವಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಬ್ಯಾರಿ ಭಾಷೆಯಲ್ಲೊಂದು ತಾಳಮದ್ದಳೆಯನ್ನು ನಡೆಸಲಾಗುವುದು’ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದರು.

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಏರ್ಪಡಿಸಿದ 7ನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಲೆ ಸಪ್ತಾಹ’ ದ ಎರಡನೇ ದಿನ ಕಲಾ ಪೋಷಕರಾದ ದಿ.ಅಳಪೆ ಶ್ರೀನಿವಾಸ ಭಟ್ ಮತ್ತು ಎ.ಶಾರದಾ ಅವರ ಸಂಸ್ಮರಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಲೆಗೆ ಜಾತಿ-ಧರ್ಮಗಳ ಬಂಧವಿಲ್ಲ. ಕರಾವಳಿ ಭಾಗದ ಯಕ್ಷಗಾನದಲ್ಲಿ ಹಲವಾರು ಮುಸಲ್ಮಾನರೂ ಕಲಾವಿದರಾಗಿ ಮಿಂಚಿದ್ದಾರೆ. ಬಪ್ಪಬ್ಯಾರಿ, ತುಘಲಕ್ ಮೊದಲಾದ ಯಕ್ಷಗಾನದ ಪಾತ್ರಗಳನ್ನು ಶೇಣಿಯಂತಹ ಮಹಾನ್ ಕಲಾವಿದರು ಅದ್ಭುತವಾಗಿ ಚಿತ್ರಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಉದ್ಘಾಟಿಸಿದ ಬೊಂಡಾಲ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮಾತನಾಡಿ, ‘ಯಕ್ಷಗಾನದ ಇಂದಿನ ಅಭಿವೃದ್ಧಿಗೆ ಕಣ್ಮರೆಯಾದ ಹಲವು ಮಂದಿ ಹಿರಿಯರು ಕಾರಣ. ಸಾರ್ವಜನಿಕವಾಗಿ ಅಂಥವರ ಸ್ಮರಣೆ ಮಾಡುವುದರಿಂದ ಮುಂದಿನ ತಲೆಮಾರಿಗೆ ಯಕ್ಷಗಾನದ ಮೇಲೆ ಗೌರವ ಮೂಡುವುದು’ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕಡಬ ದಿನೇಶ್ ಶೆಟ್ಟಿ ಹಾಗೂ ಶ್ರೀನಿವಾಸ ಭಟ್ ಪುತ್ರರಾದ ರಾಘವೇಂದ್ರ ಪ್ರಸಾದ್ ಮತ್ತು ಅರವಿಂದ ಭಟ್ ವೇದಿಕೆಯಲ್ಲಿದ್ದರು. ಯಕ್ಷಾಂಗಣ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ನಿವೇದಿತ ಎನ್.ಶೆಟ್ಟಿ ವಂದಿಸಿದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು.

ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಪದಾಧಿಕಾರಿಗಳಾದ ಅಶೋಕ ಮಾಡ ಕುದ್ರಾಡಿಗುತ್ತು, ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಕರುಣಾಕರ ಶೆಟ್ಟಿ ಪಡೆಯೂರು, ಬೆಟ್ಟಂಪಾಡಿ ಸುಂದರ ಶೆಟ್ಟಿ, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಉಮೇಶ್ ಆಚಾರ್ಯ ಗೇರುಕಟ್ಟೆ, ಸಿದ್ದಾರ್ಥ ಅಜ್ರಿ, ಶೋಭಾ ಕೇಶವ ಕಣ್ಣೂರು ಉಪಸ್ಥಿತರಿದ್ದರು.

ಬಳಿಕ ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆಯಲ್ಲಿ ‘ಸಂಧಾನ ಸಪ್ತಕ’ ಸರಣಿಯ ದ್ವಿತೀಯ ಪ್ರಸಂಗ ‘ದಕ್ಷಿಣಾಂಕ ಸಂಧಾನ’ ಯಕ್ಷಗಾನ ತಾಳಮದ್ದಳೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.