ADVERTISEMENT

ಮಂಗಳೂರು: ಹಸಿ ತ್ಯಾಜ್ಯ ಸದ್ಬಳಕೆ, ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಸಾವಯವ ‘ಉರ್ವಿ’

ವಿಶ್ವವಿದ್ಯಾಲಯದಲ್ಲಿ ಉತ್ಪತ್ತಿಯಾಗುವ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 4:33 IST
Last Updated 16 ಏಪ್ರಿಲ್ 2022, 4:33 IST
ಮಲೆಕೆದುವಿನಲ್ಲಿರುವ ಯೆನೆಪೋಯ ವಿಶ್ವವಿದ್ಯಾಲಯದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಿದ್ಧವಾಗಿರುವ ಸಾವಯವ ಗೊಬ್ಬರ.
ಮಲೆಕೆದುವಿನಲ್ಲಿರುವ ಯೆನೆಪೋಯ ವಿಶ್ವವಿದ್ಯಾಲಯದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಿದ್ಧವಾಗಿರುವ ಸಾವಯವ ಗೊಬ್ಬರ.   

ಮಂಗಳೂರು: ಯೆನೆಪೋಯ ವಿಶ್ವವಿದ್ಯಾಲಯವು ಆಸ್ಪತ್ರೆ ಮತ್ತು ಹಾಸ್ಟೆಲ್‌ಗಳಿಂದ ಉತ್ಪತ್ತಿಯಾಗುವ ಹಸಿ ಕಸವನ್ನು ಸದ್ಬಳಕೆ ಮಾಡಿಕೊಂಡು, ಸಾವಯವ ಗೊಬ್ಬರ ಉತ್ಪಾದನೆ ಆರಂಭಿಸಿದೆ.

ಹರೇಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೆಕೆದುವಿನಲ್ಲಿ ಸ್ಥಾಪಿಸಿರುವ ಘಟಕದಲ್ಲಿ ಪ್ರತಿದಿನ ಸರಾಸರಿ 2,000 ಕೆ.ಜಿ ಸಾವಯವ ಗೊಬ್ಬರ ಉತ್ಪಾದನೆ ಆಗುತ್ತಿದೆ. ಈ ಗೊಬ್ಬರದ ಗುಣಮಟ್ಟವನ್ನು ಚಿಕ್ಕಮಗಳೂರಿನ ಕೇಂದ್ರ ಕಾಫಿ ಸಂಶೋಧನಾ ಕೇಂದ್ರವು ದೃಢೀಕರಿಸಿದೆ.

‘ಯೆನೆಪೋಯ ಆಸ್ಪತ್ರೆ, ಹಾಸ್ಟೆಲ್‌ಗಳಿಂದ ಆಹಾರ ಮತ್ತು ಅಡುಗೆಮನೆ ತ್ಯಾಜ್ಯ ಸೇರಿ, ದಿನಕ್ಕೆ 2 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರ ವಿಲೇವಾರಿಗೆ ತಿಂಗಳಿಗೆ ಸುಮಾರು ₹2.25 ಲಕ್ಷ ವೆಚ್ಚವಾಗುತ್ತಿತ್ತು. ಮಹಾನಗರ ಪಾಲಿಕೆ ಕೂಡ ಗ್ರಾಮೀಣ ಮಟ್ಟದ ತ್ಯಾಜ್ಯಗಳನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವತಿಯಿಂದ ಹಸಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಯೋಚನೆ ಮಾಡಿದೆವು’ ಎನ್ನುತ್ತಾರೆ ಯೆನೆಪೋಯ ಆಸ್ಪತ್ರೆಯ ಮೇಲ್ವಿಚಾರಕ ಪ್ರವೀಣ್.

ADVERTISEMENT

‘ಕಳೆದ ಅಕ್ಟೋಬರ್‌ನಲ್ಲಿ ಘಟಕ ಆರಂಭವಾಗಿದ್ದು, ಶುರುವಿನಲ್ಲಿ ಸಂಸ್ಥೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ಸಂಸ್ಕರಣೆ ಮಾತ್ರ ನಡೆಯುತ್ತಿತ್ತು. ಎರಡು ತಿಂಗಳುಗಳಿಂದ ಸಮೀಪದ ಸೂಪರ್ ಮಾ‌ರ್ಕೆಟ್‌ವೊಂದರ ತ್ಯಾಜ್ಯ ಕೂಡ ಬರುತ್ತಿದ್ದು, ದಿನಕ್ಕೆ 7 ಟನ್ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. 14 ಕೆಲಸಗಾರರು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಉತ್ಪಾದನೆಯಾಗುವ ಗೊಬ್ಬರಕ್ಕೆ ನರ್ಸರಿಗಳು, ತೋಟಗಳ ಮಾಲೀಕರಿಂದ ಬೇಡಿಕೆ ಬರುತ್ತಿದೆ’ ಎಂದು ವಿವರಿಸಿದರು.

ತಲಾ ನಾಲ್ಕು ತೊಟ್ಟಿಗಳ ನಾಲ್ಕು ಸಾಲುಗಳಿವೆ. ಇಂತಹ ಎರಡು ಮಾದರಿಗಳನ್ನು ನಿರ್ಮಿಸಲಾಗಿದೆ. ಒಂದು ಭಾಗದಲ್ಲಿ ತ್ಯಾಜ್ಯ ಭರ್ತಿಯಾದ ಮೇಲೆ ಇನ್ನೊಂದು ಭಾಗವನ್ನು ಬಳಸಿಕೊಳ್ಳಲಾಗುತ್ತದೆ. ಒಂದು ತೊಟ್ಟಿಗೆ ದಿನಕ್ಕೆ ಅಂದಾಜು 600 ಕೆ.ಜಿ. ಹಸಿ ಕಸ ಭರ್ತಿ ಮಾಡಲಾಗುತ್ತದೆ. 30–35 ದಿನಗಳಿಗೊಮ್ಮೆ ಗೊಬ್ಬರವನ್ನು ತೆಗೆದು, ಅದನ್ನು ಸಂಸ್ಕರಿಸಿ, ಪ್ಯಾಕೆಟ್ ಸಿದ್ಧಪಡಿಸಲಾಗುತ್ತದೆ. ‘ಉರ್ವಿ’ ಬ್ರ್ಯಾಂಡ್‌ ಗೊಬ್ಬರಕ್ಕೆ ಪ್ರತಿ ಕೆ.ಜಿ.ಗೆ ₹10ರಂತೆ ದರ ನಿಗದಿಪಡಿಸಲಾಗಿದೆ.

ಸಮೃದ್ಧ ಸಾವಯವ ಗೊಬ್ಬರ
‘ತೊಟ್ಟಿಯಲ್ಲಿ ಗೊಬ್ಬರ ಸಿದ್ಧವಾದರೆ, ಕೆಳಗಿನ ರಂಧ್ರದಲ್ಲಿ ದ್ರವ ಗೊಬ್ಬರ ಸಂಗ್ರಹವಾಗುತ್ತದೆ. ಯಂತ್ರದಲ್ಲಿ ಹಸಿ ಕಸವನ್ನು ಸಣ್ಣ ತುಣುಕುಗಳನ್ನಾಗಿ ಮಾಡಿ, ಅದರ ಜೊತೆಗೆ ಮೈಕ್ರೋಬ್ಸ್ (ಬ್ಯಾಕ್ಟೀರಿಯಾ) ಸೇರಿಸುವುದರಿಂದ ಸುತ್ತಲಿನ ಪರಿಸರದಲ್ಲಿ ಅಸಹ್ಯ ವಾಸನೆ ಸಹ ಇರುವುದಿಲ್ಲ. ಗುಣಮಟ್ಟ ಪರೀಕ್ಷೆಗಾಗಿ ಈ ಗೊಬ್ಬರವನ್ನು ಚಿಕ್ಕಮಗಳೂರಿನ ಕೇಂದ್ರ ಕಾಫಿ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಏ.13ರಂದು ವರದಿ ಬಂದಿದ್ದು, ತೇವಾಂಶ, ಪಿ.ಎಚ್‌. ಮಟ್ಟ, ಆರ್ಗಾನಿಕ್ ಕಾರ್ಬನ್, ಫಾಸ್ಪೆರಸ್, ಪೊಟಾಷಿಯಂ, ಕ್ಯಾಲ್ಸಿಯಂ ಅಂಶಗಳು ಉತ್ತಮವಾಗಿ ಇರುವುದನ್ನು ದೃಢೀಕರಿಸಿದೆ’ ಎಂದು ಈ ಘಟಕದ ಯೋಜನೆ ರೂಪಿಸಿರುವ ಪರಿಸರ ಕಾರ್ಯಕರ್ತ ಜೀತ್‌ ಮಿಲನ್ ರೋಚ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.