ಬಂಟ್ವಾಳ: ಇಲ್ಲಿಗೆ ಸಮೀಪದ ಬೆಂಜನಪದವು ವಿದ್ಯಾನಗರ ರಸ್ತೆಯ ಹೈಸ್ಕೂಲ್ ರೋಡ್ ಬಳಿ ಇರುವ ಕಲ್ಲು ಕ್ವಾರಿಯ ಹೊಂಡದಲ್ಲಿ ನೀರು ತುಂಬಿದ್ದು, ಅದರಲ್ಲಿ ಯುವಕನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಸೋಮವಾರ ಪತ್ತೆಯಾಗಿದೆ.
ಬೆಂಜನಪದವು ಬಳಿಯ ಅಮ್ಮುಂಜೆ ನಿವಾಸಿ ಸಾಗರ್ (28) ಮೃತ ಯುವಕ. ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಸಾಗರ್ ಶನಿವಾರದಿಂದ ನಾಪತ್ತೆಯಾಗಿದ್ದರು.
‘ನನ್ನ ಪತ್ನಿ ಬೇಬಿಗೆ (ಸಾಗರ್ ತಾಯಿ) ಔಷಧಿ ತರಲು ನನ್ನ ಮಗನು ಬಿ.ಸಿ.ರೋಡ್‌ಗೆ ಶನಿವಾರ ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ತೆರಳಿದ್ದ. ಅಲ್ಲಿಂದ ಮರಳುವಾಗ ಆತ ಮೂರು ಮಾರ್ಗದ ಬಳಿ ರಿಕ್ಷಾದಿಂದ ಇಳಿದಿದ್ದ. ಆ ಬಳಿಕ ಮನೆಗೆ ಮರಳದೇ ನಾಪತ್ತೆಯಾಗಿದ್ದ’ ಎಂಬುದಾಗಿ ಸಾಗರ್ ತಂದೆ ಜನಾರ್ದನ ಪೂಜಾರಿ ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಾಗಿತ್ತು. ಸಾಗರ್‌ಗಾಗಿ ಆತನ ಮನೆಯವರು, ಬಂಧುಗಳು ಹಾಗೂ ಗೆಳೆಯರು ಹುಡುಕಿದ್ದರು. ಆದರೂ ಆತನ ಸುಳಿವು ಸಿಕ್ಕಿರಲಿಲ್ಲ. ಕಲ್ಲು ಕ್ವಾರಿಯ ಹೊಂಡದಲ್ಲಿ ಆತನ ಮೃತದೇಹ ಸಿಕ್ಕಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಸಾಗರ್ ಕೊಲೆಯಾಗಿರ ಬಹುದು ಎಂದು ಬಂಧುಗಳು ಹಾಗೂ ಸ್ನೇಹಿತರು ಶಂಕೆ ವ್ಯಕ್ತಪಡಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 194 (3) (4)ರಡಿ (ಅಸಹಜ ಸಾವು) ಎಫ್‌ಐಆರ್ ದಾಖಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.