ADVERTISEMENT

ಬೆಳ್ತಂಗಡಿ: ತೊರೆಯಲ್ಲಿ ಕೊಚ್ಚಿ ಹೋಗಿದ್ದ ಯುವಕರು ಪಾರು

ಸ್ಕೂಟರ್‌ನಲ್ಲಿ ತೊರೆ ದಾಟುವಾಗ ಘಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 13:19 IST
Last Updated 16 ಜೂನ್ 2025, 13:19 IST
ಸವಣಾಲು ಗ್ರಾಮದ ಹಿತ್ತಿಲಪೇಲ ಕೂಡುಜಾಲು ಬಳಿ ನದಿಯಲ್ಲಿ ಕೊಚ್ಚಿ ಹೋಗುವ ಸ್ಥಿತಿಯಲ್ಲಿರುವ ಬೈಕ್ 
ಸವಣಾಲು ಗ್ರಾಮದ ಹಿತ್ತಿಲಪೇಲ ಕೂಡುಜಾಲು ಬಳಿ ನದಿಯಲ್ಲಿ ಕೊಚ್ಚಿ ಹೋಗುವ ಸ್ಥಿತಿಯಲ್ಲಿರುವ ಬೈಕ್    

ಬೆಳ್ತಂಗಡಿ: ಸವಣಾಲು ಗ್ರಾಮದ ಹಿತ್ತಿಲಪೇಲ ಕೂಡುಜಾಲು ಬಳಿ ತೊರೆಯಲ್ಲಿ ಆದಿವಾಸಿ ಯುವಕರಿಬ್ಬರು ಸ್ಕೂಟರ್‌ ಸಹಿತ ನೀರಿನಲ್ಲಿ ಕೊಚ್ಚಿ ಹೋಗಿ ಸಿನಿಮೀಯ ರೀತಿಯಲ್ಲಿ ಬದುಕುಳಿದ ಘಟನೆ ಭಾನುವಾರ ನಡೆದಿದೆ.

ಹಿತ್ತಿಲಪೇಲ ಪ್ರದೇಶದ ಕೆಳಗಿನಪೇಲ ನಿವಾಸಿ ಸತೀಶ್, ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಅಪಾಯದಿಂದ ಪಾರಾದವರು.

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶವನ್ನು ಸಂಪರ್ಕಿಸುವ ಕೂಡುಜಾಲು ಬಳಿ ಫಲ್ಗುಣಿ ನದಿಯನ್ನು ಕೂಡುವ ಈ ತೊರೆಯಲ್ಲಿ  ಘಟನೆ ನಡೆದಿದೆ. ಕಾಡಿನಿಂದ ಹರಿದು ಬರುವ ತೊರೆಯಲ್ಲಿ ನೀರು ಕಡಿಮೆ ಇದೆ ಎಂದು ಭಾವಿಸಿ ಸ್ಕೂಟರ್‌ ಇಳಿಸಿದ್ದಾರೆ. ಆದರೆ ಅದೇ ಸಮಯಕ್ಕೆ ಕಾಡಿನ ಕಡೆಯಿಂದ ನೀರು ಏಕಾಏಕಿ ಬಂದ ಕಾರಣ ಸ್ಕೂಟರ್‌ ಸಹಿತ ಸವಾರರು ಕೊಚ್ಚಿ ಹೋಗಿದ್ದಾರೆ. ಕೆಲಸಕ್ಕೆ ಹೋಗಲು ತೆರಳುವ ಸಲುವಾಗಿ ತೊರೆಯನ್ನು ದಾಟುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಸ್ಕೂಟರ್‌ ನದಿ ಬದಿಯಲ್ಲಿ ಸಿಲುಕಿದ್ದು, ಯುವಕರಿಬ್ಬರು ಬಳ್ಳಿಯ ಸಹಾಯದಿಂದ  ಬದುಕುಳಿದಿದ್ದಾರೆ.

ADVERTISEMENT

‘ಈ ಪ್ರದೇಶ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿದ್ದು, ಈ ತೊರೆ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಹರಿಯುತ್ತದೆ. ಇಲ್ಲಿ ಸೇತುವೆ ನಿರ್ಮಿಸಲು ವನ್ಯಜೀವಿ ಅರಣ್ಯ ಇಲಾಖೆಯ ಕಾನೂನು ಅಡ್ಡಿಯಿದೆ. ಈ ಪ್ರದೇಶದಲ್ಲಿ ಸುಮಾರು 9 ಕುಟುಂಬಗಳಿದ್ದು, ಸುಮಾರು 60 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ಪ್ರದೇಶಕ್ಕೆ ವಿದ್ಯುತ್ , ರಸ್ತೆ ಸಂಪರ್ಕ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲ. ಈ ಪ್ರದೇಶಕ್ಕೆ ಇರುವ ಏಕೈಕ ರಸ್ತೆ ಇದಾಗಿದ್ದು , ಮಳೆಗಾಲದಲ್ಲಿ ಜೀವದ ಹಂಗು ತೊರೆದು ಈ ನದಿಯನ್ನು ದಾಟಿ ಹೋಗುವ ಪರಿಸ್ಥಿತಿ ಈ ಕುಟುಂಬದ್ದಾಗಿದೆ. ಸೇತುವೆ ನಿರ್ಮಾಣವಾಗುವ ತನಕ ತಾತ್ಕಾಲಿಕ ಕಾಲುಸಂಕ ನಿರ್ಮಾಣಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ನೀಡಬೇಕು’ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲ್ಲೂಕು ಕಾರ್ಯದರ್ಶಿ ಜಯಾನಂದ ಪಿಲಿಕಲ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.