ADVERTISEMENT

ಅಂತರ್ಜಲ ಕೊರತೆ; ಸಂಕಷ್ಟದಲ್ಲಿ ಅಡಿಕೆ ಬೆಳೆಗಾರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 8:31 IST
Last Updated 2 ಏಪ್ರಿಲ್ 2013, 8:31 IST

ಸಂತೇಬೆನ್ನೂರು: ಸತತ ಎರಡು ವರ್ಷಗಳ ಮಳೆ ವೈಫಲ್ಯ ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದೆ. ಹೋಬಳಿಯಾದ್ಯಂತ ನೂರಾರು ಹೆಕ್ಟೇರ್ ಅಡಿಕೆ ತೋಟಗಳಲ್ಲಿ ಬೋರ್‌ವೆಲ್‌ಗಳು ಬರಿದಾಗುತ್ತಿರುವ ಆತಂಕ ಎದುರಾಗಿದ್ದು, ರೈತರು ಕಂಗಾಲಾಗಿದ್ದಾರೆ. ಅಲ್ಲಲ್ಲಿ ಕೆಲ ತೋಟಗಳು ಒಣಗುವ ಹಂತ ತಲುಪಿವೆ.

ಚಾಲ್ತಿಯಲ್ಲಿರುವ ಬೋರ್‌ವೆಲ್‌ಗಳಿಂದ ಅಡಿಕೆ ಬೆಳೆಗೆ ಸಾಕಷ್ಟು ನೀರು ಪೂರೈಕೆಯಾಗುತ್ತಿಲ್ಲ. ಹೊಸ ಬೋರ್‌ಬೆಲ್ ಕೊರೆಸುವ ಅನಿವಾರ್ಯ ರೈತನದ್ದು. ಹೊಸದಾಗಿ ಕೊರೆಸುವ ಬೋರ್‌ವೆಲ್‌ಗಳಿಂದ ನೀರು ಬರುವ ಭರವಸೆ ಕಡಿಮೆ. ಒಂದು, ಎರಡು, ಮೂರು... ಹೀಗೆ ಅವರ ಶಕ್ತಾನುಸಾರ ರೈತರು ಬೋರ್‌ವೆಲ್ ಕೊರೆಸುವ ಪ್ರಯತ್ನದಲ್ದ್ದ್‌ದು, ಲಕ್ಷಾಂತರ ರೂಪಾಯಿಗಳನ್ನು ರೈತ ಕಳೆದುಕೊಂಡಿದ್ದಾನೆ. ಕೆಲವು ಬೋರ್‌ವೆಲ್‌ಗಳಲ್ಲಿ ನೀರು ಕಂಡರೂ ಅದು ಕೆಲವೇ ದಿನದಲ್ಲಿ ಖಾಲಿ. ವಿದ್ಯುತ್ ಕಣ್ಣಾಮುಚ್ಚಾಲೆ ರೈತನನ್ನು ಮತ್ತಷ್ಟು ಕಾಡಿದೆ.

400-500 ಅಡಿಗಳಷ್ಟು ಆಳಕ್ಕೆ ಕೊರೆಯಿಸಿದರೂ ನೀರಿನ ಸುಳಿವಿಲ್ಲ. ಅದಕ್ಕಾಗಿ ರೂ 50 ರಿಂದ 60 ಸಾವಿರ ಖರ್ಚು ತಗುಲುತ್ತಿದೆ. ಸ್ವಲ್ಪ ನೀರು ಕಂಡರೆ ವಿದ್ಯುತ್ ಸಂಪರ್ಕ, ಮೋಟಾರ್, ಕೇಬಲ್ ಖರೀದಿಗಾಗಿ ರೂ 1 ಲಕ್ಷಕ್ಕಿಂತ ಹೆಚ್ಚು ಹಣ ಸುರಿಯಲೇಬೇಕು.

ಸಂತೇಬೆನ್ನೂರು, ಕಾಕನೂರು, ನುಗ್ಗಿಹಳ್ಳಿ, ಸಿದ್ದನಮಠ, ನೀತಿಗೆರೆ, ದೊಡ್ಡೇರಿಕಟ್ಟೆ, ಸೋಮನಾಳ್, ಅರಳಿಕಟ್ಟೆ ಗ್ರಾಮಗಳಲ್ಲಿ ಹೆಚ್ಚಿನ ಅಡಿಕೆ ಬೆಳೆಗಾರರು ಕೇಂದ್ರೀಕೃತರಾಗಿದ್ದಾರೆ. ಉಳಿದಂತೆ ಹೋಬಳಿಯ ಉತ್ತರ ಹಾಗೂ ಪಶ್ಚಿಮ ಭಾಗವು ಭದ್ರಾ ನಾಲೆಯ ನೀರಾವರಿ ಪ್ರದೇಶವಾಗಿದೆ. ಬತ್ತದ ಜತೆ ಕೆಲ ರೈತರು ಅಡಿಕೆ ಬೆಳೆಯುತ್ತಾರೆ. ಅವರಿಗೆ ನೀರಿನ ಅಂತಹ ಸಮಸ್ಯೆ ಕಾಣುತ್ತಿಲ್ಲ.

ಏಪ್ರಿಲ್ ತಿಂಗಳ ಆರಂಭದಲ್ಲಿ ಮಳೆ ಬಂದಲ್ಲಿ ರೈತ ನಿಟ್ಟುಸಿರು ಬಿಡುತ್ತಾನೆ. ಇನ್ನೂ ತಡವಾಗಿ ಬಂದಲ್ಲಿ ಅಡಿಕೆ ತೋಟ ಉಳಿಸಿಕೊಳ್ಳುವ ಪ್ರಯತ್ನ ಭರವಸೆಯಿಲ್ಲದ ಬಡಿದಾಟವಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಕಾಕನೂರು ಗ್ರಾಮದ ಪ್ರಸನ್ನ.

ನೀರಿನ ಅಭಾವದಿಂದ ಇಳುವರಿ ಎಕರೆಗೆ 10 ರಿಂದ 12 ಕ್ಟಿಂಟಲ್‌ನಿಂದ 6 ರಿಂದ 7 ಕ್ವಿಂಟಲ್‌ಗೆ ಕುಸಿದಿದೆ. ತೋಟದ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ವ್ಯಯಿಸುವ ರೈತ ಬೆಲೆ ಕುಸಿತದಿಂದ ಚಿಂತೆಗೀಡಾಗಿದ್ದಾನೆ.

ಈಗಾಗಲೇ ಬೆಳೆ ಪಡೆದು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು ಸದ್ಯದ ಪರಿಸ್ಥಿತಿ ನಿಭಾಯಿಸುತ್ತಾರೆ. ಆದರೆ ಸಾಲ ಮಾಡಿ ಅಡಿಕೆ ಬೆಳೆಯ ಆರಂಭದ ದಿನಗಳಲ್ಲೇ  ನೀರು ಬತ್ತಿದಲ್ಲಿ ಸಂಕಷ್ಟಗಳ ಸುಳಿಯಲ್ಲಿ ಸಿಲುಕುವುದಂತೂ ಸತ್ಯ ಎನ್ನುತ್ತಾರೆ ಅರಳೀಕಟ್ಟೆ ಬಸಪ್ಪ.

ವಿದ್ಯುತ್ ಕೊರತೆಗಾಗಿ ವಿದ್ಯುಚ್ಚಕ್ತಿ ಮಂಡಳಿಗೆ ಹಿಡಿ ಶಾಪ ಹಾಕುವ ನಾವು, ಅಂತರ್ಜಲ ಬರಿದಾದಲ್ಲಿ ಯಾರನ್ನು ಶಪಿಸಬೇಕು ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡಿದೆ. ಭೂಮಿಗೆ ನೀರು ಮರುಪೂರಣಗೊಳ್ಳುವ ಪ್ರಮಾಣಕ್ಕಿಂತ ಹೆಚ್ಚು ಅನುಪಾತದಲ್ಲಿ ಹೊರ ತೆಗೆದರೆ ಇಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಪ್ರಮುಖ ಆರ್ಥಿಕ ಬೆಳೆ ಅಡಿಕೆ. ಅದರಿಂದ ರೈತ ಆರ್ಥಿಕ ಸಬಲತೆ ಪಡೆಯುವ ಪ್ರಯತ್ನ ತಪ್ಪಲ್ಲ. ಪ್ರಕೃತಿಯ ಕೊಡುಗೆಗಳನ್ನು ನಿಖರ ದತ್ತಾಂಶಗಳ ಆಧಾರದಿಂದ ವಿಶ್ಲೇಷಿಸಿ, ವೈಜ್ಞಾನಿಕವಾಗಿ ಬಳಕೆಯಿಂದ ಸಮತೋಲನ ಸಾಧ್ಯ ಎನ್ನುತ್ತಾರೆ ಕೃಷಿ ಅಧಿಕಾರಿ ಮಹಮದ್ ರಫಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.