ADVERTISEMENT

ಅಧಿಕಾರಕ್ಕಿಂತ ಅಭಿವೃದ್ಧಿ ಕೆಲಸ ಶಾಶ್ವತ: ರವೀಂದ್ರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 9:14 IST
Last Updated 30 ಮಾರ್ಚ್ 2018, 9:14 IST

ಹರಪನಹಳ್ಳಿ: ‘ರಾಜಕಾರಣಿಗಳಿಗೆ ಅಧಿಕಾರ ಶಾಶ್ವತವಲ್ಲ, ಅಭಿವೃದ್ಧಿ ಕೆಲಸ ಶಾಶ್ವತ ಎಂಬುದನ್ನು ಅರಿತಿದ್ದೇನೆ. ನನ್ನ ಅಧಿಕಾರವಧಿಯಲ್ಲಿ ತಾಲ್ಲೂಕಿಗೆ ಗರ್ಭಗುಡಿ ಬ್ರೀಡ್ಜ್ ಕಂ ಬ್ಯಾರೇಜ್, 60 ಕೆರೆಗಳ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದ್ದೇನೆ’ ಎಂದು ಶಾಸಕ ಎಂ.ಪಿ.ರವೀಂದ್ರ ಹೇಳಿದರು. ತಾಲ್ಲೂಕಿನ ನಂದಿಬೇವೂರು ತಾಂಡಾಕ್ಕೆ ಗುರುವಾರ ಬಂದ ಅವರು, ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಿ ಮಾತನಾಡಿದರು.‘ಹರಪನಹಳ್ಳಿ ತಾಲ್ಲೂಕು ಮರಳಿ ಬಳ್ಳಾರಿ ಜಿಲ್ಲೆಗೆ ಸೇರಿಸಿ ಸಂವಿಧಾನದ 371ಜೆ ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ನನಗೆ ಆಶೀರ್ವದಿಸಿ’ ಎಂದು ಮನವಿ ಮಾಡಿದರು.

‘ತಾಲ್ಲೂಕಿನ ಈಶಾನ್ಯ ದಿಕ್ಕಿನಲ್ಲಿರುವ ನಂದಿಬೇವೂರು ತಾಂಡಾದಿಂದ ಪ್ರಾರಂಭಿಸುವ ಶುಭ ಕಾರ್ಯಕ್ಕೆ ಇಲ್ಲಿನ ಜನರು ಆಶೀರ್ವದಿಸುವುದರಿಂದ ನಮ್ಮ ಕುಟುಂಬಕ್ಕೆ ಶುಭವಾಗಿದೆ. ಈ ಮೊದಲು ಹಡಗಲಿ ಕ್ಷೇತ್ರಕ್ಕೆ ಈ ಗ್ರಾಮ ಒಳ್ಳಪಟ್ಟಿತ್ತು. ನಮ್ಮ ತಂದೆಯವರ ಕಾಲದಿಂದಲೂ ಇಲ್ಲಿನ ಜನರು ಪ್ರೀತಿ ತೋರಿದ್ದಾರೆ. ಸೋತಾಗ ಕೈ ಹಿಡಿದ್ದಾರೆ. ₹ 80 ಲಕ್ಷ ಅನುದಾನ ನೀಡಿ ತಾಂಡಾದ ಅಭಿವೃದ್ಧಿಗೆ ಶ್ರಮಿಸಿದ್ದೇನೆ’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ವರ್ಷದ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ.  ಬಡವರು, ಹಿಂದುಳಿದ ವರ್ಗದ ಪರ ಯೋಜನೆಗಳನ್ನು ಜಾರಿಗೆ ತಂದು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ. ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು’ ಎಂದು ಮನವಿ ಮಾಡಿದರು. ನಂದಿಬೇವೂರು ತಾಂಡಾ, ನಂದಿಬೇವೂರು, ಬಾವಿಹಳ್ಳಿ, ಮೈದೂರು, ಬಳಿಗಾನೂರು, ಹಗರಿಗಜಾಪುರ, ಗೌರಿಪುರ, ಬಸವನಾಳು, ಕೆಸರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಿ ಜನರೊಂದಿಗೆ ಚರ್ಚಿಸಿದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಬಿ.ಪರುಶುರಾಮಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಓ.ರಾಮಪ್ಪ, ಮುಖಂಡರಾದ ಕೆ.ಎಂ.ಬಸವರಾಜಯ್ಯ, ಡಿ.ರಾಜಕುಮಾರ್, ಕುಬೇರಗೌಡ, ಷಣ್ಮುಖಪ್ಪ, ಗನಹೊಸೂರು ಶಿವಣ್ಣ, ಅರುಣ ಪೂಜಾರ್, ಲಾಠಿ ದಾದಾಪೀರ್, ಎಸ್.ಜಾಕೀರಹುಸೇನ್, ಪ್ರೇಮ ಕುಮಾರಗೌಡ, ಎಲ್.ಮಂಜ್ಯನಾಯ್ಕ, ವೇದುನಾಯ್ಕ, ಚಂದ್ರನಾಯ್ಕ, ಪರುಶುರಾಮ, ಇರ್ಷಾದ್‌ಬಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.