ADVERTISEMENT

ಅಧ್ಯಕ್ಷರಾಗಿ ಅಬ್ದುಲ್ ರೆಹಮಾನ್‌ಖಾನ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 7:25 IST
Last Updated 2 ಫೆಬ್ರುವರಿ 2011, 7:25 IST

ಹರಿಹರ: ನಗರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ ನಗರದ 15ನೇ ವಾರ್ಡ್‌ನ ಸದಸ್ಯ ‘ಅಬ್ದುಲ್ ರೆಹಮಾನ್ ಖಾನ್’ ಅವಿರೋಧವಾಗಿ ಆಯ್ಕೆಯಾದರು.
ನಗರಸಭೆಯ ಎರಡನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಅ’ ಸ್ಥಾನದ ಮೀಸಲಾತಿ ಪಡೆದಿತ್ತು. ಪಕ್ಷದ ವರಿಷ್ಠರ ಆದೇಶದಂತೆ ಅಬ್ದುಲ್ ರೆಹಮಾನ್ ಖಾನ್ ಹೊರತು ಜೆಡಿಎಸ್‌ನಿಂದ ಯಾವ ಆಕಾಂಕ್ಷಿಗಳೂ ನಾಮಪತ್ರ ಸಲ್ಲಿಸಿರಲಿಲ್ಲ.

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಸೈಯದ್ ರೆಹಮಾನ್ ನಾಮಪತ್ರ ಸಲ್ಲಿಕೆಗೂ ಮುನ್ನ ಕಪ್ಪು ವಸ್ತ್ರ ಧರಿಸಿ ಪ್ರತಿಭಟನೆ ನಡೆಸಿದರೂ, ನಾಮಪತ್ರ ಸಲ್ಲಿಸಲಿಲ್ಲ.ಅಬ್ದುಲ್ ರೆಹಮಾನ್ ಖಾನ್ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು. ರಾಜಕೀಯ ವಿಶ್ಲೇಷಕರ ವಿಶ್ಲೇಷಣೆಯಂತೆ ಈ ಬಾರಿಯ ನಗರಸಭೆ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತ ವ್ಯಕ್ತಿಗೆ ದೊರೆತಿದೆ.

ನೂತನ ಅಧ್ಯಕ್ಷ ಅಬ್ದುಲ್ ರೆಹಮಾನ್ ಖಾನ್ ಮಾತನಾಡಿ, ಜೆಡಿಎಸ್‌ನಲ್ಲಿ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರು ಎಂಬ ಬೇಧವಿಲ್ಲ. ಪಕ್ಷದ ವರಿಷ್ಠರ ತೀರ್ಮಾನದಂತೆ ಹಾಗೂ ನಗರಸಭೆ ಸದಸ್ಯರ ಬೆಂಬಲದಿಂದ ನಾನು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದೇನೆ ಎಂದರು.

ಕುಡಿಯುವ ನೀರು ಹಾಗೂ ದೇವಸ್ಥಾನ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೇನೆ. ನನ್ನ ಅಧಿಕಾರ ಅವಧಿಯಲ್ಲಿ ಸಾರ್ವಜನಿಕರಿಗೆ ಸೂಕ್ತವಾಗಿ ಸ್ಪಂದಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಉಪ ವಿಭಾಗಾಧಿಕಾರಿ ಕೆ.ಎಂ. ಜಾನಕಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ರೆಹಮಾನ್ ಖಾನ್ ಅವರಿಗೆ ನಗರಸಭೆ ಸದಸ್ಯರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಬೆಂಬಲಿಗರು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.