ADVERTISEMENT

ಅನಧಿಕೃತ ಇಟ್ಟಿಗೆ ಭಟ್ಟಿಗಳ ತೆರವು ಆರಂಭ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 8:05 IST
Last Updated 6 ಜನವರಿ 2012, 8:05 IST

ಹರಿಹರ: ತಾಲ್ಲೂಕಿನ ಹರ್ಲಾಪುರ ಗ್ರಾಮದ ಕೆಐಎಡಿಬಿ ಸಂಸ್ಥೆಯಿಂದ ಭೂಸ್ವಾಧೀನಗೊಂಡ ಜಮೀನಿನಲ್ಲಿ ಅನಧಿಕೃತ ಇಟ್ಟಿಗೆ ಭಟ್ಟಿಗಳ ತೆರವು ಕಾರ್ಯ ಗುರುವಾರ ಉಪ ವಿಭಾಗಧಿಕಾರಿ ಮಾಹಂತೇಶ್ ಬಿಳಗಿ ಅವರ ನೇತೃತ್ವದಲ್ಲಿ ನಡೆಯಿತು.

ಹರ್ಲಾಪುರ ಗ್ರಾಮದ ಸರ್ವೇ ನಂ. 44, 45, 46, 47, 48, 1/2, 82/1, 64, 65, 66 ಮತ್ತು 74ರ ಒಟ್ಟು 35 ಎಕರೆ 23ಗುಂಟೆ ಜಮೀನನ್ನು 1949ರಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು. 1992ರಲ್ಲಿ ಇದೇ ಗ್ರಾಮದ ಸರ್ವೆ ನಂ. 45, 46, 64, 66 ಮತ್ತು 74ರಲ್ಲಿ ಉಳಿದ 35 ಎಕರೆ 34 ಗುಂಟೆ ಜಮೀನನ್ನು  ಕೈಗಾರಿಕಾ ಪ್ರದೇಶ ವಿಸ್ತರಣೆಗಾಗಿ ವಿಶೇಷ ಭೂಸ್ವಾಧೀನಾಧಿಕಾರ ಮೂಲಕ ವಶಪಡಿಸಿಕೊಳ್ಳಲಾಗಿತ್ತು. 1984ರಲ್ಲಿ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮವು ಮಂಡಳಿಗೆ ಕೈಗಾರಿಕಾ ಪ್ರದೇಶಕ್ಕಾಗಿ ಹಸ್ತಾಂತರ ಮಾಡಿರುತ್ತಾರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತೆರವು ಕಾರ್ಯದ ಕುರಿತು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆದಿತ್ತು ಎಂದು ಮಹಾಂತೇಶ್ ಬಿಳಗಿ ವಿವರಣೆ ನೀಡಿದರು.

ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಸದರಿ ಜಮೀನಿಗೆ ಮಾಲೀಕರು ಎಂದು ಹೇಳಿಕೊಳ್ಳುವ ಕೆಲವು ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಜಮೀನು ವಶಪಡಿಸಿಕೊಂಡಿರುವ ಕೆಐಎಡಿಬಿ ಸಂಸ್ಥೆಯಿಂದ ನಮಗೆ ಯಾವುದೇ ಪರಿಹಾರ ದೊರೆತಿಲ್ಲ. ಪರಿಹಾರ ದೊರಕಿಸಿ, ನಂತರ ಭೂಸ್ವಾಧೀನ ಕಾರ್ಯ ಮಾಡಬೇಕು ಎಂದು ಪಟ್ಟು ಹಿಡಿದರು.

ಜಿಲ್ಲಾಧಿಕಾರಿಗಳ ಆದೇಶದಂತೆ ಮೊದಲು ತೆರವು ನಡೆಸಲಾಗುವುದು. ಪರಿಹಾರ ಹಣದ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ವಿಷಯ ತಿಳಿಸಲಾಗುವುದು. ತೆರವು ಕಾರ್ಯಕ್ಕೆ ಸಹಕಾರ ನೀಡಿರಿ ಎಂದು ಮನವಿ ಮಾಡಿದರು.

ಈಗಾಗಲೇ ಇಟ್ಟಿಗೆ ಭಟ್ಟಿಯ ಮೇಲೆ ಸಾಕಷ್ಟು ಬಂಡವಾಳ ಹಾಕಿರುವುದರಿಂದ ದಿಢೀರನೆ ತೆರವು ಕಾರ್ಯ ನಡೆಸಿದರೆ ಅನ್ಯಾಯವಾಗುತ್ತದೆ. ನಾಲ್ಕು ತಿಂಗಳ ಅವಕಾಶ ನೀಡಬೇಕು ಎಂದು ಭಟ್ಟಿ ಮಾಲೀಕರು ಮನವಿ ಮಾಡಿದರು.

ಪರಸ್ಪರ ಚರ್ಚೆಗಳ ನಂತರ, ತೆರವು ಕಾರ್ಯವನ್ನು 15 ದಿನಗಳವರೆಗೆ ಮುಂದೂಡಲಾಗಿದ್ದು. ಅಷ್ಟರಲ್ಲೇ ತಮ್ಮ ವಸ್ತುಗಳನ್ನು ತೆಗೆದುಕೊಂಡು ಜಮೀನು ಖಾಲಿ ಮಾಡಿಕೊಡಬೇಕು ಎಂದು ತೀರ್ಮಾನಕ್ಕೆ ಬರಲಾಯಿತು. ಚರ್ಚೆ ಒಪ್ಪಿದ ರೈತರು ಹಾಗೂ ಇಟ್ಟಿಗೆ ಭಟ್ಟಿ ಮಾಲೀಕರು ಮುಚ್ಚಳಿಕೆ ಪತ್ರ ಬರೆದುಕೊಟ್ಟರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ಜಿ. ನಜ್ಮಾ , ಕೆಐಎಡಿಬಿ ಅಧಿಕಾರಿಗಳಾದ ಬಸವರಾಜ್, ಶ್ರೀಧರ, ಸಿಪಿಐ ನಾಗೇಶ್ ಐತಾಳ್, ಪಿಎಸ್‌ಐಗಳಾದ ಎಂ.ಎನ್. ಪೂಣಚ್ಚ, ಜೆ. ರಮೇಶ್, ರಾಮಕುಮಾರ್ ಸುಣಗಾರ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.