ADVERTISEMENT

ಅನಿಷ್ಟಪದ್ಧತಿ ಆಚರಣೆ ಮಹಿಳಾ ಸಂಕುಲಕ್ಕೆ ಕಂಟಕ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನ್ಯಾ.ಪ್ರಕಾಶ್‌ ಆತಂಕ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 5:38 IST
Last Updated 12 ಮಾರ್ಚ್ 2014, 5:38 IST

ಹರಪನಹಳ್ಳಿ: ಅನಿಷ್ಟ ಪದ್ಧತಿ ಆಚರಣೆ ಮತ್ತು ಮೌಢ್ಯತೆ ಜೀವಂತಿಕೆ ಪಡೆದುಕೊಂಡಿರುವ ಪರಿಣಾಮ ಮಹಿಳಾ ಸಂಕುಲ ಶೋಷಣೆಯ ಕುಲುಮೆಯಲ್ಲಿ ಬಳಲುತ್ತಿದೆ ಎಂದು ಸ್ಥಳೀಯ ಜೆಎಂಎಫ್‌ಸಿ ಕಿರಿಯ ವಿಭಾಗದ ನ್ಯಾಯಾಧೀಶ ಪ್ರಕಾಶ್ ಅರ್ಜುನ ಬನಸೋಡೆ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಪುರಸಭಾ ಸಮುದಾಯ ಭವನದಲ್ಲಿ ಈಚೆಗೆ ‘ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ’ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಆಡಳಿತ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ತಾಲ್ಲೂಕು ಉಚಿತ ಕಾನೂನು ಸೇವಾ
ಪ್ರಾಧಿಕಾರ ಹಾಗೂ ಸ್ತ್ರೀಶಕ್ತಿ ಒಕ್ಕೂಟಗಳ ಆಶ್ರಯದಲ್ಲಿ ‘ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ತಡೆಯ ತಾಲ್ಲೂಕು
ಮಟ್ಟದ ಜನಜಾಗೃತಿ ಆಂದೋಲನ’  ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ– ತಂತ್ರಜ್ಞಾನದ ಯುಗದಲ್ಲಿಯೂ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಮೂಢನಂಬಿಕೆ ಹಾಗೂ ಅನಿಷ್ಟ
ಪದ್ಧತಿ ಆಚರಣೆಯ ಅಬ್ಬರದ ಮುಂದೆ ಸ್ತ್ರೀ ಸಮಾನತೆಯ ಕೂಗು ಕ್ಷೀಣಿಸಿದೆ.  ದೇವರ ಹೆಸರಿನಲ್ಲಿ ದೇವದಾಸಿ ಪದ್ಧತಿ ಆಚರಣೆ, ಹೆಣ್ಣು
ಭ್ರೂಣಹತ್ಯೆ, ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ಪುರೋಹಿತಶಾಹಿ ಸಂಸ್ಕೃತಿಯ ವಾರಾಸುದಾರರು ಪೋಷಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಉಪ ವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಮಾತನಾಡಿ, ವೈಜ್ಞಾನಿಕ ಯುಗದಲ್ಲಿಯೂ ಇಲ್ಲಿ ‘ಮುತ್ತು’ ಕಟ್ಟಿಸುವಂತಹ ಹೇಯ ಕೃತ್ಯಕ್ಕೆ ಮಹಿಳೆಯನ್ನು ದೂಡುತ್ತಿರುವುದು ಅಮಾನವೀಯ. ಇಂತಹ ಮೌಢ್ಯತೆ ಗಳಿಗೆ ಮಹಿಳೆ ಬಲಿಪಶು ಆಗದಂತೆ ರಕ್ಷಿಸುವ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮುಂದಾಗ ಬೇಕಿದೆ ಎಂದು ಕರೆ ನೀಡಿದರು.

ಡಿವೈಎಸ್‌ಪಿ ಕೆ.ನಾಗರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಾಮಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್‌.ಸಿದ್ದೇಶಪ್ಪ, ವಕೀಲರ ಸಂಘದ ಅಧ್ಯಕ್ಷ ಎಸ್‌.ಎಂ.ರುದ್ರಮುನಿಸ್ವಾಮಿ, ಪುರಸಭಾ ಮಾಜಿ ಅಧ್ಯಕ್ಷ ಮೆಹಬೂಬ್‌ ಸಾಹೇಬ್‌, ಮುಖ್ಯಾಧಿಕಾರಿ ಬಸವರಾಜ, ವಕೀಲರಾದ ಕೆ.ರೇವನಗೌಡ, ವಿ.ಜಿ. ಪ್ರಕಾಶಗೌಡ, ಸೀಮಾ, ಬಸವರಾಜ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.