ದಾವಣಗೆರೆ: ಆಂತರಿಕ ಭದ್ರತೆಗೆ ಭಯೋತ್ಪಾದನೆ ಪ್ರಮುಖ ಸವಾಲಾಗಿದೆ ಎಂದು ನಿರ್ಗಮಿತ ಪೂರ್ವವಲಯ ಐಜಿಪಿ ಸಂಜಯ್ ಸಹಾಯ್ ಪ್ರತಿಪಾದಿಸಿದರು.
ಬಾಪೂಜಿ ಎಂಬಿಎ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಆಂತರಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಬೇರೆಬೇರೆಯಾಗಿ ನೋಡಲಾಗುತ್ತದೆ. ಆದರೆ, ವಾಸ್ತವದಲ್ಲಿ ಎರಡೂ ಪರಸ್ಪರ ಪೂರಕ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಾವು ಯಶ ಕಂಡಿದ್ದೇವೆ. ಆದರೆ, ಇಲಾಖೆಯ ದಿನ ನಿತ್ಯದ ಕೆಲಸಗಳಲ್ಲಿ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ. ಜನರ ದೂರಿಗೆ ಸರಿಯಾಗಿ ನ್ಯಾಯಕೊಟ್ಟ ತೃಪ್ತಿ ಸಿಕ್ಕಿಲ್ಲ ಎಂದು ವಿಷಾದಿಸಿದರು.
ನೂತನ ಐಜಿಪಿ ಡಾ.ಪರಶಿವಮೂರ್ತಿ ಮಾತನಾಡಿ, ಜ್ಞಾನ ಮನುಷ್ಯನನ್ನು ಇತರೆ ಪ್ರಾಣಿಗಳಿಗಿಂತ ಉನ್ನತವಾಗಿಸಿದೆ. ಜತೆಗೆ, ವ್ಯಕ್ತಿ-ವ್ಯಕ್ತಿಗಳ ನಡುವೆಯೂ ಭಾರಿ ಬದಲಾವಣೆಯ ಅಂತರವನ್ನು ಸೃಷ್ಟಿಸಿದೆ. ನಿಜವಾದ ಓದು, ಜ್ಞಾನ ಕೆಲವರನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಸಂಜಯ್ ಸಹಾಯ್ ಬಹುಮುಖ ಪ್ರತಿಭೆಯ ಅಧಿಕಾರಿ. ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಇತರೆ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಬಳ್ಳಾರಿ ಎಸ್‌ಪಿ ಡಾ.ಚಂದ್ರಗುಪ್ತ, ಶಿವಮೊಗ್ಗ ಎಸ್‌ಪಿ ಕೌಶಲೇಂದ್ರ, ದಾವಣಗೆರೆ ಎಸ್‌ಪಿ ಲಾಭೂರಾಂ, ಬಾಪೂಜಿ ಬಿ-ಸ್ಕೂಲ್ ಪ್ರಾಂಶುಪಾಲ ಅನಿಲ್‌ಕುಮಾರ್ ಗರ್ಗ್, ವೃಷಭೇಂದ್ರಪ್ಪ, ಡಾ.ರಂಗಸ್ವಾಮಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.