ADVERTISEMENT

ಆರು ಸದಸ್ಯರ ತನಿಖೆಗೆ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 6:45 IST
Last Updated 1 ಫೆಬ್ರುವರಿ 2011, 6:45 IST

ದಾವಣಗೆರೆ: ನಕಲಿ ಡೋರ್‌ನಂಬರ್ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡಲು ಸಾಮಾನ್ಯ ಸಭೆಯಲ್ಲಿ 6 ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಯಿತು.

ನಕಲಿ ಡೋರ್‌ನಂಬರ್ ನೀಡಿರುವ ಬಗ್ಗೆ ಈಗಾಗಲೇ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಆಯುಕ್ತರು ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಮೇಯರ್ ಎಂ.ಜಿ. ಬಕ್ಕೇಶ್ ಪ್ರತಿಕ್ರಿಯೆ ನೀಡಿದರು.

ನಕಲಿ ಡೋರ್‌ನಂಬರ್‌ನಲ್ಲಿ ಮೂರು ರೀತಿಯ ಸ್ವರೂಪವಿದ್ದು, ಮೊದಲ ಪ್ರಕರಣದಲ್ಲಿ ‘ದೂಡಾ’ದಿಂದ ಅಂತಿಮ ಅನುಮೋದನೆ ಪಡೆದವರಿಗೂ ನಕಲಿ ಡೋರ್ ನಂಬರ್ ನೀಡಿದ್ದಾರೆ. ಎರಡನೇ ಪ್ರಕರಣದಲ್ಲಿ ತಾತ್ಕಾಲಿಕ ಅನುಮೋದನೆ ಪಡೆದು, ಅಂತಿಮ ಅನಿಮೋದನೆ ಪಡೆಯದೇ, ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ಯೋಜನೆ ಅಡಿ ಹಣ ನೀಡಿ, ನಕಲಿ ಡೋರ್‌ನಂಬರ್ ಪಡೆದಿದ್ದಾರೆ. ಮೂರನೇ ಪ್ರಕರಣದಲ್ಲಿ ಯಾವ ಅನುಮೋದನೆ ಪಡೆಯದೇ ನೇರವಾಗಿ ಕಂದಾಯ ನಿವೇಶನಕ್ಕೆ ನಕಲಿ ಡೋರ್‌ನಂಬರ್ ಪಡೆಯಲಾಗಿದೆ ಎಂದು ವಿವರಿಸಿದರು.

ಮೊದಲ ಎರಡು ಪ್ರಕರಣಗಳಲ್ಲಿ ನಿವೇಶನದಾರರಿಂದ ಅಭಿವೃದ್ಧಿ ಶುಲ್ಕ ಪಡೆದು ಅಕ್ರಮವನ್ನು ಸಕ್ರಮಗೊಳಿಸಲಾಗುವುದು. ಮೂರನೇ ಪ್ರಕರಣದಲ್ಲಿ ಇರುವ ನಕಲಿ ನಂಬರ್‌ಗಳನ್ನು ರದ್ದುಪಡಿಸಲಾಗುವುದು ಎಂದರು.ಇಂತಹ ಪ್ರಕರಣದಲ್ಲಿ ಅನ್ಯಾಯಕ್ಕೆ ಒಳಗಾದ ಸಾರ್ವಜನಿಕರು ಬಂದು ದೂರು ನೀಡಬೇಕು. ಆರೋಪಿಗಳು ಎಂಥ ಪ್ರಭಾವಿಗಳಾದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.