ADVERTISEMENT

ಆಹೋರಾತ್ರಿ ಶಿವನಾಮ ಸ್ಮರಣೆ-ಜಾಗರಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 9:00 IST
Last Updated 3 ಮಾರ್ಚ್ 2011, 9:00 IST
ಆಹೋರಾತ್ರಿ ಶಿವನಾಮ ಸ್ಮರಣೆ-ಜಾಗರಣೆ
ಆಹೋರಾತ್ರಿ ಶಿವನಾಮ ಸ್ಮರಣೆ-ಜಾಗರಣೆ   

ದಾವಣಗೆರೆ: ಸ್ಮಾರ್ತರು, ಶೈವರು, ವೀರಶೈವರು ಸೇರಿದಂತೆ ಬಹುತೇಕ ಹಿಂದೂಗಳಿಗೆ ಬಹುದೊಡ್ಡ ಧಾರ್ಮಿಕ ಹಬ್ಬ ಶಿವರಾತ್ರಿ.ಚಂದ್ರನನ್ನೇ ತಲೆಯಲಿ ಮುಡಿದ, ಗಂಗೆಯನ್ನೇ ಜಡೆಯಲಿ ಬಿಗಿದ ಈ ಮುಕ್ಕಣ್ಣನ ಭಕ್ತರ ಸಂಖ್ಯೆ ಕೋಟಿ... ಕೋಟಿ, ಈತನೇ ಭಕ್ತರ ಆರಾಧ್ಯ ದೈವ ‘ಏಳು ಕೋಟಿ’ಶಿವನಿಗೆ ಹೆಸರೂ ನೂರಾರು, ಮಡದಿಯರು ಇಬ್ಬರು. ‘ಕೈಲಾಸ’ ತ್ರಿಶೂಲಧಾರಿಯ ಅರಮನೆ. ಆಕಾರ-ನಿರಾಕರಗಳೆರಡರ ಸಂಗಮ ಈತನ ವಿಶಿಷ್ಟತೆ ಇಂತಹ ವಿಶಿಷ್ಟತೆಯ ಲಯಕರ್ತನ ಮಹೋನ್ನತ ಸ್ಮರಣೆಯೇ ‘ಮಹಾ ಶಿವರಾತ್ರಿ’

ಮಳೆಗಾಲ ಮುಗಿಯುತ್ತಿದ್ದಂತೆ ತಣ್ಣಗೆ ಹರಡುವ ಚಳಿ ಮಕ್ಕಳು, ವೃದ್ಧರೂ ಎನ್ನದೇ ಸವಾರಿ ಮಾಡುತ್ತದೆ. ಆದರೆ, ಈ ಚಳಿರಾಯನಿಗೂ ಅದೇಕೋ ಪರಶಿವನ ಕಂಡರೆ ಭಯ! ಅದಕ್ಕೆ ಇರಬೇಕು ಮೂರು ತಿಂಗಳು ಇಲ್ಲೇ ಠಿಕಾಣಿ ಹೂಡಿದ ಚಳಿರಾಯ ಶಿವರಾತ್ರಿ ಸಮೀಪಿಸುತ್ತಿದಂತೆ ಕಾಲು ಕೀಳುತ್ತಾನೆ.

ಇನ್ನು ಶಿವರಾತ್ರಿ ಎಂದರೆ ವಸಂತನ ಆಗಮನಕ್ಕೆ ಮುನ್ನುಡಿ ಬರೆಯುವ ಪ್ರಮುಖ ಕಾಲಘಟ್ಟ. ಶುಭ್ರ ಆಗಸದ ಬೇಸಿಗೆಗೆ ನಾಂದಿ ಹಾಡುವ ಆಹ್ಲಾದಕರ ಅನುಭವ. ಪ್ರಕೃತಿ ಪ್ರಿಯರಿಗೆ ಹೊಸ ಸೃಷ್ಟಿಯ ಸೊಬಗಿನ ಸಿಂಚನ. ವಿದ್ಯಾರ್ಥಿಗಳಿಗೆ ಪರೀಕ್ಷಾ ಜ್ವರದ ಅನಾವರಣ. ಬಯಲಲ್ಲೇ ನೆಮ್ಮದಿಯ ಬದುಕು ಕಾಣುವ ಕಷ್ಟಜೀವಿಗಳಿಗೆ ರಾತ್ರಿಯೆಲ್ಲ ನಕ್ಷತ್ರ ಎಣಿಸುವ ಭಾಗ್ಯ!

ಇಂಥ ಹತ್ತು ಹಲವು ವಿಶಿಷ್ಟತೆಯ ಶಿವರಾತ್ರಿಯನ್ನು ಜಿಲ್ಲೆಯಾದ್ಯಂತ ಜನರು ಸಡಗರ ಸಂಭ್ರಮದಿಂದ ಆಚರಿಸಿದರು. ಶಿವನ ಆರಾಧಕರಿಗೆ ಶಿವರಾತ್ರಿಯೇ ಏಕಾದಶಿ. ದಿನವಿಡೀ ಉಪವಾಸದಲ್ಲಿ ತೊಡಗಿದ ಭಕ್ತರು, ಸಂಜೆ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ತುಂಬೆಯಿಂದ ಪೂಜೆ ಸಲ್ಲಿಸಿದ ನಂತರ ಫಲಹಾರ, ಉಪ್ಪಿಟ್ಟು, ಅವಲಕ್ಕಿ ಸೇವಿಸಿದರು. ನಗರದ ಎಲ್ಲ ಶಿವಾಲಯಗಳ ಮುಂದೆ ರಾತ್ರಿ ಭಕ್ತರ ದಂಡು ನೆರೆದಿತ್ತು. ಹಲವು ಕಡೆ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ದಾನಿಗಳು ಬೆಲ್ಲದ ಪಾನಕ, ಕೋಸುಂಬರಿ ವಿತರಿಸಿದರು.

ದೇಗುಲಕ್ಕೆ ಭಕ್ತರ ಭೇಟಿ
ಚನ್ನಗಿರಿ:
ತಾಲ್ಲೂಕಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ಈಶ್ವರ ದೇವಾಲಯಗಳಿಗೆ ಭಕ್ತರು ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದಲೇ ಭಕ್ತರು ಈಶ್ವರ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದುಕೊಂಡು ಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು, ಜಾಗರಣೆ ಅಂಗವಾಗಿ ದೇವಾಲಯಗಳಲ್ಲಿ ಈಶ್ವರನ ಲಿಂಗಕ್ಕೆ ಅಭಿಷೇಕ ಕಾರ್ಯ ನೆರವೇರಿಸಲಾಯಿತು. ಸಂಜೆಯ ಮೇಲೆ ದೇವಾಲಯಗಳಿಗೆ ಭಕ್ತರ ಭೇಟಿ ಹೆಚ್ಚಿತು. ತಾಲ್ಲೂಕಿನ ಮಾವಿನಹೊಳೆ ಗ್ರಾಮದಲ್ಲಿ ನಡೆದ ಮಹಾರುದ್ರಸ್ವಾಮಿಯ ವಿಶೇಷ ಅಭಿಷೇಕ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

ಜಾಗರಣೆ ಅಂಗವಾಗಿ ಕಲ್ಲಂಗಡಿ ಹಣ್ಣಿಗೆ ಭಾರಿ ಬೇಡಿಕೆ. ರೂ 100ರಿಂದ 150ಕ್ಕೆ ಒಂದು ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡಲಾಯಿತು. ಒಟ್ಟಾರೆ ಎಲ್ಲಾ ಹಣ್ಣು-ಹಂಪಲುಗಳ ಬೆಲೆ ಏರಿಕೆಯಾಗಿತ್ತು. ಅತ್ಯಂತ ಸಂಭ್ರಮ, ಸಡಗರದಿಂದ ಜಾಗರಣೆ ನಡೆಸಲಾಯಿತು.

ಸಂಭ್ರಮದ ಮಹಾಶಿವರಾತ್ರಿ
ಮಲೇಬೆನ್ನೂರು:
ಇಲ್ಲಿನ ವಿವಿಧ ಶಿವಾಲಯಗಳಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಬುಧವಾರ ಜನತೆ ಆಚರಿಸಿದರು.ಕಾಶಿವಿಶ್ವೇಶ್ವರ, ಕಲ್ಲೇಶ್ವರ, ಬಸವೇಶ್ವರ, ಬೀರಲಿಂಗೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ರುದ್ರಾಭಿಷೇಕ ಹಮ್ಮಿಕೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆ ಭಕ್ತರು ಉಪಸ್ಥಿತರಿದ್ದರು. ಹೆಚ್ಚಿನ ವ್ಯಾಪಾರ: ಕಲ್ಲಂಗಡಿ ಹಣ್ಣಿನ ವ್ಯಾಪಾರ ಬಿರುಸಿನಿಂದ ಸಾಗಿತ್ತು. ಖರ್ಬೂಜ, ಪಪ್ಪಾಯಿ, ದ್ರಾಕ್ಷಿ, ಬಾಳೆಹಣ್ಣು ಹಾಗೂ ಖರ್ಜೂರ ವ್ಯಾಪಾರ ಹೆಚ್ಚಾಗಿತ್ತು.

ರುದ್ರಹೋಮ: ಸಮೀಪದ ಕೊಮಾರನಹಳ್ಳಿ ರಂಗನಾಥಾಶ್ರಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ‘ರುದ್ರಹೋಮ’ ಹಮ್ಮಿಕೊಂಡಿದ್ದರು.
ಆರಾಧನೆಗೆ ಚಾಲನೆ: ಸಮೀಪದ ಕೊಮಾರನಹಳ್ಳಿ ರಂಗನಾಥಾಶ್ರಮದ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ 58ನೇ ವಾರ್ಷಿಕ ಆರಾಧನೆ(ಸಪ್ತಾಹ) ಸೋಮವಾರ ಗಣಪತಿ ಹೋಮದಿಂದ ಆರಂಭವಾಯ್ತು.

ವಿಶೇಷ ಪೂಜೆ
ನ್ಯಾಮತಿ:
ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ  ಶಿವರಾತ್ರಿ ನಿಮಿತ್ತ ವಿಶೇಷ ಪೂಜೆ, ಪುನಸ್ಕಾರ, ಉಪಾಸನೆಯನ್ನು ನಡೆಸಲಾಯಿತು.ವೀರಭಧ್ರೇಶ್ವರ ದೇವಸ್ಥಾನ, ಮಾರಿಕಾಂಬ ದೇವಸ್ಥಾನ, ಕಲ್ಲುಮಠದ ಜಡೆಯಶಂಕರ ಸ್ವಾಮಿ, ಆಂಜನೇಯಸ್ವಾಮಿ, ಪಾಂಡುರಂಗ ವಿಠ್ಠಲ ದೇವಸ್ಥಾನ, ಬನಶಂಕರಿ ದೇವಸ್ಥಾನ. ಅರಳಿಕಟ್ಟೆ ವೃತ್ತದ ಈಶ್ವರ ಬಸವೇಶ್ವರ, ಕಣ್ಣಪ್ಪ ದೇವಸ್ಥಾನ, ಮರದ ಅಮ್ಮ, ಕಾಳಿಕಾಂಬ ದೇವಸ್ಥಾನ, ಪೇಟೆ ಬಸವೇಶ್ವರ, ಮೈಲಾರಲಿಂಗೇಶ್ವರ ದೇವಸ್ಥಾನಗಳಲ್ಲಿ ಭಕ್ತರು ಭಯ ಭಕ್ತಿಯಿಂದ ಪೂಜೆ ನೆರವೇರಿಸಿದರು.ಶಿವರಾತ್ರಿ ಆಚರಣೆ ನಿಮಿತ್ತ ಹಣ್ಣುಗಳ ಬೆಲೆ ವಿಪರೀತ ಹೆಚ್ಚಿವೆ ಆದರೂ, ಪೂಜೆಗೆ ಖರೀದಿ ಮಾಡಲೆಬೇಕಾಗಿದೆ ಎಂಬುದು ಗ್ರಾಮಸ್ಥರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.