ADVERTISEMENT

ಇಂದು ಈದ್ ಮಿಲಾದ್ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 10:05 IST
Last Updated 16 ಫೆಬ್ರುವರಿ 2011, 10:05 IST

ದಾವಣಗೆರೆ: ಈದ್ ಮಿಲಾದ್ ಹಿನ್ನೆಲೆಯಲ್ಲಿ ಪ್ರವಾದಿ ಮಹಮದ್ ಅವರ ಶಾಂತಿ ಸಂದೇಶ ಸಾರುವ ಉದ್ದೇಶದಿಂದ ನಗರದಲ್ಲಿ ಬುಧವಾರ (ಫೆ. 16)ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅಂಜುಮಮ್ ಇಸ್ಲಾಂ ಸಂಘಟನೆಯ ಮುಖಂಡ ಜೆ. ಅಮಾನುಲ್ಲಾ ಖಾನ್ ತಿಳಿಸಿದರು.ನಗರದ ವಿವಿಧ ಭಾಗಗಳಲ್ಲಿ ಮೆರವಣಿಗೆ ನಡೆಯಲಿದ್ದು, ಸಮುದಾಯ ಬಾಂಧವರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಹಿಂದೂ ಸಮಾಜ ಬಾಂಧವರೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಮೆರವಣಿಗೆ ಮಾರ್ಗ: ಮಧ್ಯಾಹ್ನ 2.30ರಿಂದ ಆಜಾದ್ ನಗರದಿಂದ ಮೆರವಣಿಗೆ ಆರಂಭವಾಗಲಿದೆ. ಚಾಮರಾಜ ವೃತ್ತ, ಮಂಡಿಪೇಟೆ, ಆಜಾದ್ ನಗರ, ತಾಲ್ಲೂಕು ಕಚೇರಿ ಮುಂಭಾಗ, ಬಾರ್‌ಲೈನ್ ರಸ್ತೆ, ಅರುಣಾ ವೃತ್ತ, ಪಿಬಿ ರಸ್ತೆ, ಗಾಂಧಿವೃತ್ತದ ಮೂಲಕ ಸಾಗಿ ಅಶೋಕ ಚಿತ್ರ ಮಂದಿರದ ಸಮೀಪ ಹಾದುಹೋಗಲಿದೆ. ಅಲ್ಲಿಂದ ಕೆ.ಆರ್. ರಸ್ತೆ ಮೂಲಕ ಸಾಗಿ ಅರಳಿಮರ ವೃತ್ತವನ್ನು ಹಾದು ಮಿಲ್ಲತ್ ಕಾಲೇಜು ಮೈದಾನದಲ್ಲಿ ಕೊನೆಗೊಳ್ಳಲಿದೆ. ಬಳಿಕ ಸಭೆ ನಡೆಯಲಿದೆ ಎಂದು ವಿವರಿಸಿದರು.

ಹಿಂದೂ ಸಂಘಟನೆಗಳ ಮುಖಂಡರೂ ಸಹಕಾರದ ಭರವಸೆ ನೀಡಿದ್ದಾರೆ. ತಮ್ಮ ಸಮುದಾಯದ ಎಲ್ಲರಿಗೂ ಸೂಕ್ತ ಸೂಚನೆ ನೀಡಲಾಗಿದೆ. ಸಾಕಷ್ಟು ಸ್ವಯಂಸೇವಕರನ್ನೂ ನಿಯೋಜಿಸಲಾಗಿದೆ. ಅಬ್ಬರದ ಸಂಗೀತ(ಡಿಜೆ ಸೆಟ್), ಬಣ್ಣ ಎರಚುವಿಕೆ ಇತ್ಯಾದಿಯನ್ನು ನಿಷೇಧಿಸಲಾಗಿದೆ. ಕಿಡಿಗೇಡಿತನ ಕಂಡುಬಂದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೈಯದ್ ಚಾರ್ಲಿ, ಅನೀಸ್ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.