ADVERTISEMENT

ಇಳಿಮುಖವಾಗುತ್ತಿದೆ ನದಿ ನೀರಿನಮಟ್ಟ

ಕುಡಿಯುವ ನೀರಿನ ಬರದ ಭೀತಿಯಲ್ಲಿ ನಾಗರಿಕರು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 6:24 IST
Last Updated 18 ಡಿಸೆಂಬರ್ 2013, 6:24 IST

ಹರಿಹರ: ನಗರದ ಜೀವನದಿ ತುಂಗಭದ್ರ ನದಿಯ ನೀರಿನ ಹರಿವು ಕಡಿಮೆಯಾಗಿದ್ದು, ಬೇಸಿಗೆ ಹಂಗಾಮಿನಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಬರ ಕಾಡುವ ಭೀತಿ ಎದುರಾಗಿದೆ.

ನಗರಸಭೆಯಿಂದ ನಗರಕ್ಕೆ ಕುಡಿಯವ ನೀರು ಸರಬರಾಜು ಮಾಡಲು ರಾಣೇಬೇನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮದ ಬಳಿ ಜಾಕ್ವೆಲ್ ನಿರ್ಮಿಸಲಾಗಿದೆ. ನದಿ ನೀರು ಜಾಕ್ವೆಲ್‌ನ ಕಿಟಕಿಯ ಮೂಲಕ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾದ ನೀರನ್ನು ಪೈಪ್‌ಲೈನ್ ಮುಖಾಂತರ ಶುದ್ಧೀಕರಣ ಘಟಕಕ್ಕೆ ಸರಬರಾಜು ಮಾಡಲಾಗುತ್ತದೆ.

ಮರಳುಗಾರಿಕೆಯಿಂದ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿ. ನದಿಯ ನೀರಿನ ಮಟ್ಟದ ಜಾಕ್ವೆಲ್ ಕಿಟಕಿಗಳ ಅರ್ಧಕ್ಕಿಂತ ಕೆಳಗೆ ಇಳಿದಿದೆ. ನೀರಿನ ಹರಿವು ಕಡಿಮೆಯಾಗುವ ಮುನ್ನ ಜಾಕ್ವೆಲ್ ಸುತ್ತಲಿನ ಪ್ರದೇಶದಲ್ಲಿ ಮರಳಿನ ಚೀಲಗಳನ್ನು ಹಾಕಿಸಿ ತಡೆ ಗೋಡೆ ಅಥವಾ ತಾತ್ಕಾಲಿಕ ಚೆಕ್-ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸುವ ಕಾರ್ಯ ಆರಂಭವಾಗಬೇಕಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

ಇದರ ಜತೆಗೆ ಜಾಕ್ವೆಲ್ ಸುತ್ತಮುತ್ತ ಬಟ್ಟೆ ಹಾಗೂ ಜಾನುವಾರು ಶುಚಿಗೊಳಿಸುವ ಗ್ರಾಮಸ್ಥರಿಂದ ಮಲಿನ ನೀರು ಜಾಕ್ವೆಲ್ ಸೇರುವ ಸಾಧ್ಯತೆ ಹೆಚ್ಚಾಗಿದೆ.

ಜಾಕ್ವೆಲ್ ಸುತ್ತ ಸುಮಾರು ನಾಲ್ಕೈದು ಮೀಟರ್ ಸುತ್ತಳತೆಯಲ್ಲಿ ಬಟ್ಟೆ ಹಾಗೂ ಜಾನುವಾರು ಶುಚಿಗೊಳಿಸುವ ಕಾರ್ಯ ಕಡಿವಾಣ ಹಾಕಲು ಬೇಲಿ ನಿರ್ಮಾಣ ಮಾಡಬೇಕು.

ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುವ ಮೊದಲೇ, ಹರಿದು ಪೋಲಾಗುತ್ತಿರುವ ನೀರನ್ನು ತಡೆದು ನೀರು ಸಂಗ್ರಹಿಸುವ ತಾತ್ಕಾಲಿಕ ಚೆಕ್ ಡ್ಯಾಂ ನಿರ್ಮಾಣಕ್ಕೆ ನಗರಸಭೆಯಿಂದ ಯಾವುದೇ ಕ್ರಮಗಳ ನಡೆಯದಿರುವುದು, ಅಧಿಕಾರಿ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ವರ್ಷದ ಮಳೆಗಾಲ ಉತ್ತಮವಾಗಿದ್ದು ನೀರಿನ ಕೊರತೆ ಕಾಡುವುದಿಲ್ಲ ಎಂಬುದು ಸಾರ್ವಜನಿಕರ ನಂಬಿಕೆ ಹುಸಿಯಾಗುವ ಮೊದಲೇ ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲಿ ಎಂಬುವುದು ಸಾರ್ವಜನಿಕರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.