ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ: ಡಿಡಿಪಿಐ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 6:40 IST
Last Updated 12 ಡಿಸೆಂಬರ್ 2012, 6:40 IST

ದಾವಣಗೆರೆ: ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 10ರ ಒಳಗೆ ಸ್ಥಾನ ಪಡೆಯಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ಡಿ.ಕೆ. ಶಿವಕುಮಾರ ತಿಳಿಸಿದರು.

ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಬಾರಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 17ನೇ ಸ್ಥಾನ ಗಳಿಸಿತ್ತು. ಈ ಬಾರಿ ಕನಿಷ್ಠ 10ರ ಒಳಗೆ ಸ್ಥಾನ ಪಡೆಯಲು ಪ್ರಯತ್ನ ನಡೆಸಲಾಗುವುದು. ಈ ಕುರಿತು ಈಗಾಗಲೇ ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ ಅವರ ನೇತೃತ್ವದಲ್ಲಿ ಮೂರು ಬಾರಿ ಸಭೆ ನಡೆಸಲಾಗಿದೆ ಎಂದರು.

ಜನವರಿ-ಮಾರ್ಚ್ ತನಕ  ಪ್ರತಿ 15 ದಿನಗಳಿಗೊಮ್ಮೆ ಸರಣಿ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದ ಮಕ್ಕಳಿಗೆ ಜ. 15ರ ನಂತರ ನುರಿತ ಶಿಕ್ಷಕರಿಂದ ವಾರದಲ್ಲಿ 5 ದಿನ ತರಗತಿ ನಡೆಸಲಾಗುವುದು. ಅಲ್ಲದೇ, ಪ್ರೌಢಶಾಲಾ ಶಿಕ್ಷಕರ ಸಭೆ ನಡೆಸಿ, `ಪ್ರಶ್ನೆಪತ್ರಿಕೆ ಬ್ಯಾಂಕ್' ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಡಿ. 10ರಿಂದ 15ರ ತನಕ ಜಿಲ್ಲಾದ್ಯಂತ `ಶಾಲೆಬಿಟ್ಟ ಮಕ್ಕಳ ಗಣತಿ' ಕಾರ್ಯ ನಡೆಸಲಾಗುವುದು. 12ರಿಂದ 15ರ ತನಕ `ವಿಕಲಚೇತನ ಮಕ್ಕಳ ಗಣತಿ' ನಡೆಸಲಾಗುವುದು. ಜಿಲ್ಲೆಯಲ್ಲಿ ಡಿ. 24ರಂದು `ಪ್ರತಿಭಾ ಕಾರಂಜಿ' ನಡೆಸಲಾಗುವುದು. ಜ. 1ರಿಂದ 7ರ ತನಕ ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿ ನಡೆಸಲಾಗುವುದು. ಜನಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಿವಕುಮಾರ ಕೋರಿದರು.

ಡೆಸ್ಕ್ ವಿತರಣೆಗೆ ಕ್ರಮ
ಪ್ರೌಢಶಾಲೆಗಳಿಗೆ ಮಾತ್ರವಲ್ಲ ಪ್ರಾಥಮಿಕ ಶಾಲೆಗಳಿಗೂ ಪೀಠೋಪಕರಣಗಳನ್ನು ವಿತರಿಸಬೇಕು ಎಂದು ಅಂಬಿಕಾ ರಾಜಪ್ಪ ಸೂಚಿಸಿದರು.ಸರ್ವ ಶಿಕ್ಷಣ ಅಭಿಯಾನ ಅಧಿಕಾರಿ ಕೆ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶೇ 80ರಷ್ಟು ರಿಯಾಯ್ತಿಯಲ್ಲಿ ಡೆಸ್ಕ್ ಖರೀದಿಸಲು ಪತ್ರ ವ್ಯವಹಾರ ಮಾಡಲಾಗಿದೆ. 6 ಮತ್ತು 7ನೇ ತರಗತಿಗಳಿಗೆ ಡೆಸ್ಕ್ ಖರೀದಿಸಲು ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.

ವಿಶೇಷ ಅನುದಾನ
ಜಿಲ್ಲೆಯಲ್ಲಿ 100ವರ್ಷ ಪೂರೈಸಿದ ಶಾಲೆಗಳಿಗೆ ಸರ್ಕಾರ ವಿಶೇಷ ಅನುದಾನ ನೀಡುವ ಕುರಿತು ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಜಿಲ್ಲಾವಾರು ದಾಖಲೀಕರಣವನ್ನೂ ಸರ್ಕಾರ ಕೇಳಿದೆ. ಈ ಕುರಿತು ಸರ್ಕಾರಕ್ಕೆ ಪಟ್ಟಿ ಕಳುಹಿಸಿಕೊಡಲಾಗುವುದು ಎಂದು ಡಿಡಿಪಿಐ ತಿಳಿಸಿದರು.

ಕಡ್ಡಾಯ ಶೌಚಾಲಯಕ್ಕೆ ಸೂಚನೆ
ಜಿ.ಪಂ. ಅಧ್ಯಕ್ಷೆ ಶೀಲಾ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದರು. ಇದಕ್ಕೆ ದನಿಗೂಡಿಸಿದ ಜಿ.ಪಂ. ಉಪ ಕಾರ್ಯದರ್ಶಿ ಷಡಕ್ಷರಪ್ಪ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದಲ್ಲಿ ಶೌಚಾಲಯಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು. `ನಿರ್ಮಲ ಭಾರತ ಅಭಿಯಾನ'ದ ಅಡಿ ಶೌಚಾಲಯ ಕಲ್ಪಿಸಬೇಕು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಕಾರ್ಯ ಶೀಘ್ರ ಪೂರ್ಣಗೊಳ್ಳಬೇಕು ಎಂದು ಡಿಡಿಪಿಐಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.