ದಾವಣಗೆರೆ ಬೃಹತ್ ನಗರವಾಗಿ ರೂಪುಗೊಳ್ಳುವ ಮುನ್ನವೇ ತರಕಾರಿ ಮಾರುಕಟ್ಟೆ ರೂಪಿಸಿದ ಕೀರ್ತಿ ಇಲ್ಲಿನ ಪುರಪಿತೃಗಳದು. ಆದರೆ, ದಶಕಗಳ ಹಿಂದೆ ರೂಪಿಸಿದ್ದ ಆ ಮಾರುಕಟ್ಟೆಗಳಿಗೆ ಇಂದಿಗೂ ಮೂಲಸೌಕರ್ಯ ಮರೀಚಿಕೆಯಾಗಿಯೇ ಉಳಿದಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಗರದ ಕೆ.ಆರ್. ಮಾರುಕಟ್ಟೆ.
50 ವರ್ಷಗಳಿಗೂ ಹಿಂದೆ ರೂಪುಗೊಂಡ ಈ ಮಾರುಕಟ್ಟೆಗೆ ಇಂದಿಗೂ ಉತ್ತಮ ವಿದ್ಯುತ್ ಸೌಲಭ್ಯವಿಲ್ಲ. ಒಬ್ಬ ಮನುಷ್ಯ ಮಾತ್ರ ಓಡಾಡುವಷ್ಟು ಜಾಗ ಮಾತ್ರ ಬಿಟ್ಟು ರೂಪಿಸಿರುವ ಮಳಿಗೆ ಕಟ್ಟೆಗಳಲ್ಲೇ ಇಲ್ಲಿನ ವ್ಯಾಪಾರಸ್ಥರ ಬದುಕು ಸಾಗುತ್ತಿದೆ.
ಸುಮಾರು 400ಕ್ಕೂ ಹೆಚ್ಚು ಮಳಿಗೆಗಳು ಇಲ್ಲಿವೆ. ದಿನನಿತ್ಯದ ಅಡುಗೆಗೆ ಬೇಕಾಗುವ ಸೊಪ್ಪು-ತರಕಾರಿಯಿಂದ ಹಿಡಿದು ಕಿರಾಣಿ ಸಾಮಾನಿನ ತನಕದ ಮಳಿಗೆಗಳು ಇಲ್ಲಿ ಕಾಣಬರುತ್ತವೆ. ಕುಡಿಯಲು ಸಮರ್ಪಕ ನೀರಿನ ವ್ಯವಸ್ಥೆ, ವಿದ್ಯುತ್ ಮತ್ತು ಶೌಚಾಲಯ ಸೌಕರ್ಯ ತಕ್ಷಣಕ್ಕೆ ಇಲ್ಲಿ ಆಗಬೇಕಿರುವ ಕೆಲಸಗಳು ಎನ್ನುತ್ತಾರೆ ಇಲ್ಲಿನ ವ್ಯಾಪಾರಸ್ಥರು.
ಇನ್ನು ಜಿಲ್ಲಾಧಿಕಾರಿ ಕಚೇರಿ ಪಕ್ಕದ ಇರುವ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕುಡಿಯುವ ನೀರು ಮತ್ತು ಕಸ ವಿಲೇವಾರಿ ಸಮಸ್ಯೆ ಇದೆ. ವರ್ಷದ ಹಿಂದೆಯೆಷ್ಟೇ ವಿದ್ಯುತ್ ಸಂಪರ್ಕ ನೀಡಲಾಗಿದೆ. ಆದರೆ, ದಿನಕ್ಕೆ 3ರಿಂದ 4 ತಾಸು ಕರೆಂಟ್ ಇರುವುದಿಲ್ಲ. ಇಲ್ಲಿನ ಚಿಲ್ಲರೆ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ, ಲಗೇಜ್ ಆಟೋರಿಕ್ಷಾಗಳಿಗೆ ನಿಲ್ದಾಣ, ದನಕರುಗಳು ಪ್ರವೇಶಿಸಿದಂತೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಮಳಿಗೆಯೊಂದರ ಮಾಲೀಕ ಎಸ್.ಎನ್. ಚಂದ್ರಣ್ಣ.
ಕಸ ವಿಲೇವಾರಿಗೆ ಕಂಟೇನರ್, ಗುಣಮಟ್ಟದ ವಿದ್ಯುತ್‌ಗೆ ಹೆವಿಲೈನ್ ಟ್ರಾನ್ಸ್‌ಫಾರ್ಮರ್, ಹೈಮಾಸ್ಟ್ ದೀಪ, ತರಕಾರಿ ಸಂರಕ್ಷಣೆಗೆ ಸುಸಜ್ಜಿತ ಗೋದಾಮು ಬೇಕು. ಅಲ್ಲದೇ, ರೈತರಿಗೆ ಪ್ಲಾಸ್ಟಿಕ್ ಕಂಟೇನರ್ಸ್ ಅನ್ನು ಸರ್ಕಾರ ಸಬ್ಸಿಡಿ ದರದಲ್ಲಿ ವಿತರಿಸುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸುತ್ತಾರೆ ಎಪಿಎಂಸಿ ಮಳಿಗೆ ಮಾಲೀಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ.
ಗಡಿಯಾರ ಕಂಬದ ಬಳಿ ಹಾಗೂ ಕಾಯಿಪೇಟೆ ಬಳಿ ನಡೆಯುವ ತರಕಾರಿ ಮಾರುಕಟ್ಟೆಯಲ್ಲೂ ಮೂಲಸೌಕರ್ಯದ ಕೊರತೆ ಇದೆ. ಪಾಲಿಕೆಯವರು ತಪ್ಪದೇ ಜಕಾತಿ ವಸೂಲಿ ಮಾಡುತ್ತಾರೆ. ಆದರೆ, ಸೌಲಭ್ಯ ಮಾತ್ರ ಕಲ್ಪಿಸಿಲ್ಲ. ಇಲ್ಲಿದ್ದ ಮರಗಳನ್ನು ಕಡಿಸಿದ್ದರಿಂದ ಮಳೆಗಾಲದಲ್ಲಿ ಈ ಭಾಗದ ವ್ಯಾಪಾರಿಗಳಿಗೆ ಅನನುಕೂಲ ಆಗುತ್ತದೆ ಎಂದು ದೂರುತ್ತಾರೆ ಇಲ್ಲಿನ ವ್ಯಾಪಾರಿಗಳು.
ಒಟ್ಟಿನಲ್ಲಿ ನಗರದ ಮೂರು ಪ್ರಮುಖ ಮಾರುಕಟ್ಟೆಗಳಿಗೆ ಮೂಲಸೌಕರ್ಯ ಕಲ್ಪಿಸಿದಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅನುಕೂಲವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.