ADVERTISEMENT

ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ‘ಕಣಸುಗ್ಗಿ’

ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ರೈತರಿಂದ ಒಕ್ಕಣೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 8:53 IST
Last Updated 10 ಜನವರಿ 2014, 8:53 IST

ಚನ್ನಗಿರಿ:  ಗ್ರಾಮೀಣ ಸೊಗಡು ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಸಾಂಪ್ರದಾಯಿಕ ‘ಕಣಸುಗ್ಗಿ’ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ಇದರ ಬದಲು ರಸ್ತೆ ‘ಕಣಸುಗ್ಗಿ’ ಕಾರ್ಯ ಹೆಚ್ಚಾಗಿ ಕಂಡು ಬರುತ್ತಿದೆ.

ಪ್ರತಿವರ್ಷ ಜನವರಿ   ಪ್ರಾರಂಭವಾಯಿತೆಂದರೆ ಕಣಸುಗ್ಗಿ ಕಾರ್ಯವನ್ನು ರೈತರು ಪ್ರಾರಂಭಿಸುತ್ತಾರೆ.

ಕಣಸುಗ್ಗಿ ಎಂದರೆ ವರ್ಷವೀಡಿ ರೈತರು ಬೆಳೆದ ಬೆಳೆಗಳಿಂದ ಕಾಳನ್ನು ಬೇರ್ಪಡಿಸುವ ಕಾರ್ಯಕ್ಕೆ ಕಣಸುಗ್ಗಿ ಎಂದು ಗ್ರಾಮೀಣ ಪ್ರದೇಶಗಳಲ್ಲಿ ಕರೆಯುತ್ತಾರೆ. ಹೈಬ್ರಿಡ್‌ ಜೋಳ ಹಾಗೂ ರಾಗಿ ತೆನೆಯ ರೂಪದಲ್ಲಿ ಇರುತ್ತವೆ. ಈ ತೆನೆಯಿಂದ ಕಾಳನ್ನು ಬೇರ್ಪಡಿಸುವ ಸಲುವಾಗಿ ಸುಮಾರು 200 ಕೆ.ಜಿ.ಗಿಂತ ಹೆಚ್ಚು ತೂಕದ ರೋಣಗಲ್ಲನ್ನು ಎತ್ತುಗಳ ನೊಗಕ್ಕೆ ಕಟ್ಟಿ ಹುಲ್ಲಿನ ಮೇಲೆ ಹಾಯಿಸುತ್ತಾರೆ.
ಕಣ ಎಂದರೆ ಹುಲ್ಲನ್ನು ತುಳಿಸಲು ಇರುವ ವಿಶಾಲವಾದ ಮೈದಾನ.

ಈ ಮೈದಾನದಲ್ಲಿ ಬೆಳಿಗ್ಗೆ ರಾಗಿ ಹುಲ್ಲಿನ ತೆನೆ ಅಥವಾ ಹೈಬ್ರಿಡ್‌ ಜೋಳದ ತೆನೆಗಳನ್ನು ಸುತ್ತಲೂ ಹಾಕಿ ನಂತರ ರೋಣಗಲ್ಲನ್ನು ಸುಮಾರು ಮೂರು ಅಥವಾ ನಾಲ್ಕು ಗಂಟೆಗಳ ನಿರಂತರವಾಗಿ ಹಾಯಿಸಿದಾಗ ತೆನೆಯಿಂದ ಕಾಳು ಬೇರ್ಪಡುತ್ತದೆ. ಆಮೇಲೆ ಅದನ್ನು ಸಂಸ್ಕರಿಸಿ ಕಾಳನ್ನು ಒಂದೆಡೆ ಸಂಗ್ರಹಿಸಿ, ರಾಶಿ ಪೂಜೆ ಮಾಡಿ ನಂತರ ಮನೆಗಳಿಗೆ ತೆಗೆದುಕೊಂಡು ಹೋಗಿ ಹಗೇವು ಅಥವಾ ಕಣಜದಲ್ಲಿ ವರ್ಷಕ್ಕೆ ಒಂದು ಕುಟುಂಬದ ಊಟಕ್ಕೆ ಆಗುವಷ್ಟು ಕಾಳನ್ನು ಕೆಡದಂತೆ ಸಂಗ್ರಹಿಟ್ಟುಕೊಳ್ಳುತ್ತಾರೆ.

ಆದರೆ, ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಕಣಸುಗ್ಗಿ ಕಾರ್ಯ ಮಾಯವಾಗುತ್ತಿದೆ. ಅದರ ಬದಲು ರೈತರು ರಸ್ತೆಗಳಲ್ಲಿ ವಾಹನಗಳ ಸಂಚರಿಸುವ ಜಾಗದಲ್ಲಿ ರಾಗಿ, ಭತ್ತ, ತೊಗರಿ, ಹೈಬ್ರಿಡ್‌ ಜೋಳ ಮುಂತಾದ ತೆನೆಗಳನ್ನು ಹಾಕಿ ಕಣಸುಗ್ಗಿ ಕಾರ್ಯ ಮಾಡುವ ಪರಿಪಾಠ ಹೆಚ್ಚಾಗಿದೆ. ಇದರಿಂದ ಸಾಂಪ್ರದಾಯಿಕ ಕಣಸುಗ್ಗಿ ಮಾಡುವ ರೈತರ ಸಂಖ್ಯೆ ಕಡಿಮೆಯಾಗಿ    ಗ್ರಾಮೀಣ ಪ್ರದೇಶದ ಸೊಗಡು ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕಣಸುಗ್ಗಿ ಕಾರ್ಯ ಕಣ್ಮರೆಯಾಗುತ್ತಿದೆ.

‘ಸುಗ್ಗಿಯ ಕಾಲ ಬಂತು ಸಗ್ಗದ ಸುಖ ತಂತು, ನಮ್ಮಯ್ಯ ನಾಡಿನ ಜನಕ್ಕೆಲ್ಲಾ’ ಎಂದು  ಸಾಂಪ್ರದಾಯಿಕ ಕಣಸುಗ್ಗಿ ಕಾರ್ಯ ಮಾಡುವ ರೈತರು ರೋಣಗಲ್ಲನ್ನು ಹಾಯಿಸುತ್ತಾ ಹಾಡುತ್ತಿದ್ದರು. ಆದರೆ, ಇಂದು ಈ ಜಾಗದಲ್ಲಿ ಮೊಬೈಲ್‌ಗಳು ಬಂದು ಆವರಿಸಿಕೊಂಡು ಸಿನಿಮಾ ಹಾಡುಗಳನ್ನು ಕೇಳುವಂತಾಗಿದೆ. ಇದರಿಂದ ಸುಗ್ಗಿಯ ಹಾಡುಗಳು ಕೂಡಾ ಮಾಯವಾಗುತ್ತಿವೆ. ಕೇವಲ ಬೆರಳಣಿಕೆಯಷ್ಟು ರೈತರು ಮಾತ್ರ ಇನ್ನು ಸಾಂಪ್ರದಾಯಿಕ ಕಣಸುಗ್ಗಿ ಕಾರ್ಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಾಂಪ್ರದಾಯಿಕ ಕಣಸುಗ್ಗಿ ಕಾರ್ಯ ಸಂಪೂರ್ಣವಾಗಿ ಕಣ್ಮರೆಯಾಗುವ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತಿದೆ ಎನ್ನಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.